Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಸಾಕಾರಗೊಂಡ 5 ದಶಕಗಳ ಕನಸು, ವಿಶ್ವದ 2ನೇ ಅತಿ ದೊಡ್ಡ ಯೋಜನೆ ಲೋಕಾರ್ಪಣೆ – News Mirchi

ಸಾಕಾರಗೊಂಡ 5 ದಶಕಗಳ ಕನಸು, ವಿಶ್ವದ 2ನೇ ಅತಿ ದೊಡ್ಡ ಯೋಜನೆ ಲೋಕಾರ್ಪಣೆ

ಐದು ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ. ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಯೋಜನೆ ಗುಜರಾತ್ ನಲ್ಲಿ ಲೋಕಾರ್ಪಣೆಗೊಂಡಿದೆ. ಮಹತ್ವಾಕಾಂಕ್ಷೆಯ ಸರ್ದಾರ್ ಸರೋವರ್ ಡ್ಯಾಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಪೂಜೆ ನೆರವೇರಿಸಿದರು.

ವೇದ ಮಂತ್ರಗಳ ನಡುವೆ ನರ್ಮದಾ ನದಿಗೆ ಆರತಿ ನೀಡಿ, ಅಣೆಕಟ್ಟೆಯನ್ನು ಪರಿಶೀಲಿಸಿದ ಪ್ರಧಾನಿ ಸುತ್ತಾಡಿದರು. ಈ ವಿಶೇಷ ಸಂದರ್ಭದಲ್ಲಿ ಅಣೆಕಟ್ಟು ಬಣ್ಣ ಬಣ್ಣದ ಹೂಗಳಿಂದ ಅಲಂಕೃತವಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಮುಂತಾದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರ್ದಾರ್ ಸರೋವರ್ ಡ್ಯಾಮ್ ನಂತಹ ಅದ್ಭುತ ಯೋಜನೆಯನ್ನು ನಿರ್ಮಿಸುವುದು ಭಾರತದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕನಸಾಗಿತ್ತು. 1946 ರಲ್ಲಿಯೇ ಅವರ ದೂರದೃಷ್ಟಿಯಿಂದ ಈ ಕುರಿತು ಚಿಂತನೆ ನಡೆಸಿದ್ದರು. ನರ್ಮದಾ ನದಿ ಮೇಲೆ 30 ದೊಡ್ಡ ದೊಡ್ಡ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಸರ್ದಾರ್ ಸರೋವರ್ ಡ್ಯಾಮ್ ಯೋಜನೆಯೇ ಅತಿ ದೊಡ್ಡದು.

ಈ ಅಣೆಕಟ್ಟೆಯ ಉದ್ದ 1.2 ಕಿ.ಮೀ., ಜಲಾಶಯದ ಆಳ 163 ಮೀಟರ್. ಸುಮಾರು 30 ಗೇಟುಗಳಿರುವ ಈ ಅಣೆಕಟ್ಟೆಯ ಪ್ರತಿ ಗೇಟ್ ಸುಮಾರು 450 ಟನ್ ನಷ್ಟು ತೂಕವಿದೆ. ಒಂದು ಗೇಟ್ ಮುಚ್ಚಲು ಸುಮಾರು 1 ಗಂಟೆ ಸಮಯ ಹಿಡಿಯುತ್ತದೆ. ಬಳಸಿದ ಕಾಂಕ್ರೀಟ್ ಪ್ರಮಾಣವನ್ನು ನೋಡಿದರೆ ಸರ್ದಾರ್ ಸರೋವರ್ ಡ್ಯಾಮ್ ವಿಶ್ವದಲ್ಲಿಯೇ ಸರ್ದಾರ್ ಸರೋವರ್ ಡ್ಯಾಮ್ ಅತಿ ದೊಡ್ಡ ಯೋಜನೆ. ಅಮೆರಿಕದ ಗ್ರ್ಯಾಂಡ್ ಕೌಲಿ ಡ್ಯಾಮಿ ನಂತರ ಅತ್ಯಂತ ಹೆಚ್ಚು ಕಾಂಕ್ರೀಟ್ ಬಳಸಿದ್ದು ಈ ಯೋಜನೆಗೇ. ಎತ್ತರ ಹೆಚ್ಚಳದಿಂದ ಸರೋವರ್ ಡ್ಯಾಮ್ ನೀರು ಶೇಖರಣಾ ಸಾಮರ್ಥ್ಯ 4.73 ಮಿಲಿಯನ್ ಚದರಡಿಗೆ ಹೆಚ್ಚಾಗಿದೆ.

ಈ ಯೋಜನೆಯಿಂದಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಜನತೆ ಲಾಭ ಪಡೆಯಲಿದ್ದಾರೆ. ಹತ್ತು ಲಕ್ಷ ರೈತರಿಗೆ ಈ ಯೋಜನೆಯಿಂದ ಪೂರ್ಣ ಪ್ರಮಾಣದಲ್ಲಿ ನೀರಾವರಿ ಲಭ್ಯವಾಗುತ್ತದೆ. 4 ಕೋಟಿ ಜನರಿಗೆ ಕುಡಿಯುವ ನೀರು ಲಭಿಸುತ್ತದೆ. ಸರ್ಧಾರ್ ಸರೋವರ್ ಯೋಜನೆ ಮೂಲಕ ನರ್ಮದಾ ನದಿ ನೀರನ್ನು ಗುಜರಾತ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಭಾಗಗಳಿಗೆ ಕಾಲುವೆ, ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.

18 ಸಾವಿರದ 144 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ರಾಜಸ್ಥಾನದ ಬರಡು ಜಿಲ್ಲೆಗಳಾದ ಬಾರ್ಮೆರ್, ಜಲೋರ್ ಸೇರಿದಂತೆ ಒಟ್ಟು 2.46 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯವಾಗುತ್ತದೆ. ಮಹಾರಾಷ್ಟ್ರದಲ್ಲಿ 37 ಸಾವಿರದ 500 ಹಕ್ಟೇರ್ ಗಳಿಗೆ ನೀರಾವರಿ ಪ್ರಯೋಜನವಾಗಲಿದೆ. ಇಲ್ಲಿ ಸುಮಾರು 9 ಸಾವಿರದ 633 ಗ್ರಾಮಗಳು, 131 ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ವಿಶೇಷವಾಗಿ ಹಂಚಿಕೆ ಮಾಡಲಾಗಿದೆ.

ಸರ್ದಾರ್ ಅಣೆಕಟ್ಟೆಯಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದು, ಇದೀಗ ಅಂದಾಜು ಪ್ರತಿ ವರ್ಷ 100 ಕೋಟಿ ಯೂನಿಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಸದ್ಯ ಪ್ರತಿ ದಿನ 1450 ಮೆಗಾ ವ್ಯಾಟ್ ವಿದ್ಯುತ್ ತಯಾರಿಸುವ ಸಾಮರ್ಥ್ಯದ ನಿರ್ಮಾಣ ಪೂರ್ಣಗೊಂಡಿದೆ. ಡ್ಯಾಮ್ ವ್ಯಾಪ್ತಿಯಲ್ಲಿ ಎರಡು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ನದಿಯ ಜಲಾನಯನ ಪ್ರದೇಶಗಳಲ್ಲಿ ಒಂದು, ಕಾಲುವೆ ಆರಂಭದಲ್ಲಿ ಮತ್ತೊಂದ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೂಲಕ ಇದುವರೆಗೂ 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಇವುಗಳ ಸಾಮರ್ಥ್ಯ ಕ್ರಮವಾಗಿ 1200, 250 ಮೆಗಾವ್ಯಾಟ್. ಇವುಗಳ ಮೂಲಕ ಆಗುವ ಲಾಭ 16 ಸಾವಿರ ಕೋಟಿ. ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಮಧ್ಯಪ್ರದೇಶ ಶೇ.57, ಮಹಾರಾಷ್ಟ್ರ ಶೇ.27, ಗುಜರಾತ್ ಶೇ.16 ರಷ್ಟು ಪಾಲು ಹಂಚಿಕೊಳ್ಳಲಿವೆ.

ಏಪ್ರಿಲ್ 5 1961 ರಂದು ಶಂಕುಸ್ಥಾಪನೆಯಾದ ಸರೋವರ್ ಯೋಜನೆ ಅನೇಕ ಕಾರಣಗಳಿಂದ ತಡವಾಗುತ್ತಾ ಬಂದಿತ್ತು. ಡ್ಯಾಮ್ ಅನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ನಡೆಸಿದ ನರ್ಮದಾ ಬಚಾವೋ ಆಂದೋಲನ ಇದರಲ್ಲಿ ಪ್ರಮುಖವಾದದ್ದು.

ಪರಿಸರ, ಪುನರ್ವಸತಿ ವಿಷಯಗಳಿಗೆ ಸಂಬಂಧಿಸಿದಂತೆ ಎನ್.ಬಿ.ಎ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಕಾರ್ಯಕರ್ತರು ಸುಪ್ರೀಂ ಕೋರ್ಟ್ ನಿಂದ ತಡೆ ಆದೇಶ ತಂದಿದ್ದರಿಂದ, 1996 ರಲ್ಲಿ ನಿರ್ಮಾಣ ಕಾಮಗಾರಿ ನಿಂತಿತ್ತು. ನಂತರ 2000 ರ ಅಕ್ಟೋಬರ್ ನಲ್ಲಿ ಉಳಿದ ಕಾಮಗಾರಿ ಕೈಗೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅಂದಿನಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಐದು ದಶಕಗಳ ಕನಸು ನನಸಾಯಿತು.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!