ಟಿಪ್ಪು ಜಯಂತಿ: ರಾಜ್ಯಾದ್ಯಂತ ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು: ವಿರೋಧದ ನಡುವೆಯೂ ವಿವಾದಿತ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಅಚಲ ನಿರ್ಧಾರ ಕೈಗೊಂಡಿದ್ದು, ಅಂದು ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ನವೆಂಬರ್ 10 ರಂದು ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸುಮಾರು 20 ಸಾವಿರ ಗೃಹರಕ್ಷಕರಿಂದ ಭದ್ರತೆ ನೀಡಲಾಗುತ್ತದೆ.

ಈಗಾಗಲೇ 5 ಅರ್‌ಎಎಫ್ ತುಕಡಿಗಳನ್ನು ಧಾರವಾಡ, ಕೊಡಗು, ಮಂಗಳೂರು ಜಿಲ್ಲೆಗಳಿಗೆ ಭದ್ರತೆಗಾಗಿ ಕಳುಹಿಸಲಾಗಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಸೋಮವಾರ ಸಂಜೆ 4 ಗಂಟೆಯಿಂದ ನವೆಂಬರ್ 11 ರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಟಿಪ್ಪು ಜಯಂತಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ತಡೆಯಲು ಪ್ರತಿ ಎರಡು ಜಿಲ್ಲೆಗಳಿಗೆ ಒಬ್ಬರು ಎಡಿಜಿಪಿಗಳನ್ನು ನೇಮಕ ಮಾಡಲಾಗಿದೆ. ಜಯಂತಿಯಂದು ಮತ್ತಷ್ಟು ಆರ್‌ಎಎಫ್ ತುಕಡಿಗಳನ್ನು ಕಳುಹಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.