ಗೌರಿ ಹತ್ಯೆ ಹಿನ್ನೆಲೆ, 15 ಕ್ಕೂ ಹೆಚ್ಚು ಬರಹಗಾರರು, ಚಿಂತಕರಿಗೆ ಭದ್ರತೆ |News Mirchi

ಗೌರಿ ಹತ್ಯೆ ಹಿನ್ನೆಲೆ, 15 ಕ್ಕೂ ಹೆಚ್ಚು ಬರಹಗಾರರು, ಚಿಂತಕರಿಗೆ ಭದ್ರತೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಇರುವ ಸಾಹಿತಿಗಳು, ಪ್ರಗತಿಪರರು ಮತ್ತು ಎಡಪಂಥೀಯ ಚಿಂತನೆಯ ಬರಹಗಾರರಿಗೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ನೀಡಲು ಮುಂದಾಗಿದೆ. ನಾಟಕಕಾರ ಗಿರೀಶ್ ಕಾರ್ನಾಡ್, ವಿವಾದಿತ ಸಾಹಿತಿ ಕೆ.ಎಸ್.ಭಗವಾನ್, ಕುಂ.ವೀರಭದ್ರಪ್ಪ, ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ನಿಡುಮಾಮಿಡಿ ಮಠದ ವೀರಭದ್ರಚೆನ್ನಮಲ್ಲ ಸ್ವಾಮಿ ಮುಂತಾದವರು ಪೊಲೀಸ್ ಭದ್ರತೆ ಪಡೆಯಬಹುದು ಎನ್ನಲಾಗಿದೆ.

ಇವರಲ್ಲದೆ ವಿಚಾರವಾದಿ ನರೇಂದ್ರ ನಾಯಕ್, ಸಾಹಿತಿ ಯೋಗೇಶ್ ಮಾಸ್ಟರ್, ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿರುವ ಚೇತನಾ ತೀರ್ಥಹಳ್ಳಿ, ಬರಗೂರು ರಾಮಚಂದ್ರಪ್ಪ, ಮರುಳಸಿದ್ದಪ್ಪ, ಪ್ರೊ. ಸಿದ್ದಲಿಂಗಯ್ಯ ಮತ್ತು ಬಂಜಗೆರೆ ಜಯಪ್ರಕಾಶ್ ಅವರೂ ಪೊಲೀಸ್ ಭದ್ರತೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೀವ ಬೆದರಿಕೆ ಎದುರಿಸುತ್ತಿರುವ ಎಲ್ಲಾ ಬರಹಗಾರರು ಮತ್ತು ಹೋರಾಟಗಾರರ ಪಟ್ಟಿ ತಯಾರಿಸಿ ಅವರಿಗೆಲ್ಲಾ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜೀವ ಬೆದರಿಕೆಯಿದ್ದರೂ ಗೌರಿ ಲಂಕೇಶ್ ಅವರಿಗೆ ರಾಜ್ಯ ಸರ್ಕಾರವೇಕೆ ರಕ್ಷಣೆ ನೀಡಿಲ್ಲವೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟೀಕಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮೂಲಗಳ ಪ್ರಕಾರ ಪೊಲೀಸರು ಈಗಾಗಲೇ 35 ಜನರ ಪಟ್ಟಿಯನ್ನು ಸಿದ್ಧಗೊಳಿಸಿದ್ದು, ಅವರಲ್ಲಿ ಅಂತಿಮವಾಗಿ ಸುಮಾರು 15 ಜನರಿಗೆ ರಕ್ಷಣೆ ಒದಗಿಸಬಹುದು ಎನ್ನಲಾಗುತ್ತಿದೆ. ಜೀವ ಬೆದರಿಕೆ ಇರುವ ಎಲ್ಲಾ ಪ್ರಗತಿಪರ ಚಿಂತಕರಿಗೆ ಅವರು ಮನವಿ ಮಾಡದಿದ್ದರೂ ನಾವು ರಕ್ಷಣೆ ಒದಗಿಸುತ್ತೇವೆ ಎಂದು ಗೃಹಸಚಿವ ಆರ್.ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ.

Loading...
loading...
error: Content is protected !!