ವೀರಪ್ಪನ್ ಹತ್ಯೆಯ ಹಿಂದಿನ ಕುತೂಹಲಕಾರಿ ಸ್ಟೋರಿ

ಮೂರು ರಾಜ್ಯಗಳಿಗೆ ತಲೆನೋವಾಗಿ ಕಾಡಿದ್ದ ಕಾಡುಗಳ್ಳ ವೀರಪ್ಪನ್ ಅಷ್ಟು ಸುಲಭವಾಗಿ ಪೊಲೀಸರ ಕೈಯಲ್ಲಿ ಸತ್ತಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿರುತ್ತವೆ. ಆತ ಹತ್ಯೆಯಾಗಿದ್ದು ಹೇಗೆ ಎಂಬುದರ ಕುರಿತು ತಮ್ಮ ಅನುಭವಗಳನ್ನು ಮಾಜಿ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಒಂದು ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಆದರೆ ಅದರಲ್ಲಿನ ಕೆಲ ಮಾಹಿತಿ ಬಹಿರಂಗವಾಗಿದೆ.

ವೀರಪ್ಪನ್ ಹತ್ಯೆಯಲ್ಲಿ ಚೆನ್ನೈನ ಪ್ರಸಿದ್ಧ ಉದ್ಯಮಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಲಾಗಿದೆ. ವೀರಪ್ಪನ್ ಗಾಗಿ ವಿಜಯ್ ಕುಮಾರ್ ನಡೆಸಿದ ಬೇಟೆ, ಹೆಣೆದ ತಂತ್ರದ ವಿವರಗಳಿವು.

ಚೆನ್ನೈನ ಆ ಉದ್ಯಮಿಗೂ ವೀರಪ್ಪನ್ ಗೂ ಹಲವು ವರ್ಷಗಳ ಗೆಳೆತನವಿತ್ತು. ಹೀಗಾಗಿ ಆ ಉದ್ಯಮಿಯ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು. ಅದೊಂದು ದಿನ ವೀರಪ್ಪನ್ ಕಡೆಯ ಗೂಢಚಾರ ನೊಬ್ಬ ಆ ಉದ್ಯಮಿಯನ್ನು ಯಾವುದೋ ವಿಷಯಕ್ಕೆ ಹೋಟೆಲ್ ನಲ್ಲಿ ಭೇಟಿ ಮಾಡಿದ್ದ. ನಂತರ ಆ ಗೂಢಚಾರ ಅಲ್ಲಿಂದ ಹೊರಟು ಹೋದ ಕೂಡಲೇ ಕಮಾಂಡೋ ಪಡೆಗಳು ಉದ್ಯಮಿಯನ್ನು ಸುತ್ತುವರೆದವು.

ತನಗೆ ಇನ್ನೂ ಹೆಚ್ಚು ಶಸ್ತ್ರಾಸ್ತ್ರಗಳು ಬೇಕು, ತನಗೆ ದೃಷ್ಟಿ ಕ್ಷೀಣಿಸಿರುವುದರಿಂದ ಕಣ್ಣಿನ ಆಪರೇಷನ್ ಗೆ ಸಿದ್ಧತೆ ಮಾಡಬೇಕು ಎಂದು ವೀರಪ್ಪನ್ ತನ್ನ ಗೂಢಚಾರನ ಕೈಯಲ್ಲಿ ಹೇಳಿ ಕಳುಹಿಸಿದ್ದ ಎಂದು ವಿಚಾರಣೆಯಲ್ಲಿ ಉದ್ಯಮಿ ಬಾಯಿಬಿಟ್ಟಿದ್ದ. ಈ ಮಾಹಿತಿಯನ್ನು ಪಡೆದ ಪೊಲೀಸರು ವೀರಪ್ಪನ್ ನನ್ನು ಹಿಡಿಯಲು ಯೋಜನೆ ರೂಪಿಸಿದರು. ಚೆನ್ನೈನ ದೊಡ್ಡ ರೌಡಿ ಅಯೋಧ್ಯಕುಪ್ಪಂ ವೀರಮಣಿಯನ್ನು ಎನ್ಕೌಂಟರ್ ಮಾಡಿದ್ದ ಎಸ್‌ಐ ವೆಲ್ಲದುರೈ ಅವರನ್ನು ವೀರಪ್ಪನ್ ಬಳಿಗೆ ಮಾರುವೇಷದಲ್ಲಿ ಕಳುಹಿಸಲು ವಿಜಯ್ ಕುಮಾರ್ ತೀರ್ಮಾನಿಸಿದರು.

ಉದ್ಯಮಿ ಹೇಳಿದಂತೆ ವೀರಪ್ಪನ್ ತನ್ನ ಕಡೆಯಿಂದ ಒಬ್ಬ ಗೂಢಚಾರನನ್ನು ಕಳುಹಿಸಿದ್ದ. ಧರ್ಮಪುರಿಯಲ್ಲಿ ಟೀ ಅಂಗಡಿಯೊಂದರಲ್ಲಿ ತನ್ನನ್ನು ಭೇಟಿ ಮಾಡಿದ ವೀರಪ್ಪನ್ ನ ಗೂಢಚಾರನಿಗೆ “ತಾನೊಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ, ಆತನೊಂದಿಗೆ ಬಂದರೆ ಮಧುರೈ ಅಥವಾ ತಿರುಚ್ಚಿಯಲ್ಲಿ ವೀರಪ್ಪನ್ ಗೆ ಕಣ್ಣಿನ ಆಪರೇಷನ್ ಮಾಡಿಸುತ್ತೇನೆ” ಎಂದು ಉದ್ಯಮಿ ಹೇಳಿದ. ಆಗ ಒಂದು ಲಾಟರಿ ಟಿಕೆಟ್ ಖರೀದಿಸಿದ ವೀರಪ್ಪನ್ ಕಡೆಯ ಗೂಢಚಾರ, ಅದನ್ನು ಅರ್ಧ ಹರಿದು ಒಂದು ಭಾಗವನ್ನು ತಾನಿಟ್ಟುಕೊಂಡು ಮತ್ತೊಂದು ಭಾಗವನ್ನು ಉದ್ಯಮಿಯ ಕೈಗೆ ನೀಡಿದ. ಟಿಕೆಟ್ ನ ಎರಡನೇ ಭಾಗ ತಂದವರೊಂದಿಗೆ ವೀರಪ್ಪನ್ ಬರುತ್ತಾರೆ ಎಂದು ಹೇಳಿದೆ.

ವಿಜಯ್ ಕುಮಾರ್ ಆದೇಶದಂತೆ ಎಸ್ಐ ವೆಲ್ಲದುರೈ ಆ ಲಾಟರಿ ಟಿಕೆಟ್ ನ ಎರಡನೇ ಭಾಗವನ್ನು ಹಿಡಿದು ಕಾಡಿನಲ್ಲಿ ವೀರಪ್ಪನ್ ಭೇಟಿ ಮಾಡಿದ. ತನ್ನ ಬಳಿಯಿದ್ದ ಮೊದಲರ್ಧ ಭಾಗದ ಟಿಕೆಟ್ ಹೋಲಿಸಿ ನೋಡಿದ ನಂತರ ಎಸ್ಐ ವೆಲ್ಲದುರೈ ನನ್ನು ವೀರಪ್ಪನ್ ನಂಬಿದ. ವೆಲ್ಲದುರೈ ಹೇಳಿದಂತೆ ಚಿಕಿತ್ಸೆಗಾಗಿ ಹೊರಡಲು ಸಿದ್ಧನಾದ.

ಪೊಲೀಸರು ಮೊದಲೇ ಸಿದ್ಧಪಡಿಸಿ ಕಳುಹಿಸಿದ್ದ ಅಂಬ್ಯುಲೆನ್ಸ್ ನೊಳಗೆ ವೀರಪ್ಪನ್ ಮತ್ತು ಅತನ ಸಹಚರರು ಹತ್ತಿದರು. ಧರ್ಮಪುರಿ ಬಳಿ ಸಿದ್ಧವಾಗಿದ್ದ ಕಮಾಂಡೋ ಪೊಲೀಸರು ವೀರಪ್ಪನ್ ಮೇಲೆ ಗುಂಡು ಹಾರಿಸಿ ಕೊಂದರು. ವೀರಪ್ಪನ್ ನನ್ನು ಹತ್ಯೆ ಮಾಡಲು ಸಹಕರಿಸಿದ ಕಾರಣಕ್ಕೆ ಆ ಉದ್ಯಮಿಯ ಮೇಲೆ ಪೊಲೀಸರು ಯಾವುದೇ ಕೇಸ್ ದಾಖಲಿಸಿಕೊಳ್ಳಲಿಲ್ಲ. ಆ ಉದ್ಯಮಿಯ ಹೆಸರನ್ನು ಮಾತ್ರ ಮಾಜಿ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಬಹಿರಂಗಪಡಿಸಿಲ್ಲ.