ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಕ್ಕಳ ಬೃಹನ್ನಾಟಕ?

ಉತ್ತರ ಪ್ರದೇಶದ ಆಡಳಿತ ಪಕ್ಷದ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ವಿಚಿತ್ರ ತಿರುವು ಪಡೆಯುತ್ತಿವೆ. ಈಗ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಗಮನ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳ ಕಡೆ ನೆಟ್ಟಿದೆ. ಪಕ್ಷದಿಂದ ತಮ್ಮ ತಂದೆ ಮುಲಾಯಂ ಸಿಂಗ್ ರವರೇ ಆರು ವರ್ಷಗಳ ಕಾಲ ಉಚ್ಛಾಟಿಸಿದ ನಂತರ, ಆ ರಾಜ್ಯದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.

ಈ ಸಭೆಗೆ ಪಕ್ಷದ ಹಿರಿಯ ನಾಯಕರು ಸೇರಿದಂತೆ190 ಪಕ್ಷದ ಶಾಸಕರು ಹಾಜರಾಗಿದ್ದರೆಂದು ಅಖಿಲೇಶ್ ಆಪ್ತರು ಹೇಳಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ನಂತರ ನಂತರ ಅಖಿಲೇಶ್ ಯಾದವ್, ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಭೇಟಿಗೆ ಅವರ ನಿವಾಸಕ್ಕೆ ತೆರಳಿದರು. ಅದೇ ವೇಳೆಗೆ ಮುಲಾಯಂ ಸಿಂಗ್ ತಮ್ಮ ಬೆಂಬಲಿಗರೊಂದಿಗೆ ಚರ್ಚೆಯಲ್ಲಿದ್ದರು. ಅವರು ಕರೆದಿದ್ದ ಸಭೆಗೆ 20 ಶಾಸಕರು ಹಾಜರಾಗಿದ್ದರೆಂದು ತಿಳಿದುಬಂದಿದೆ. ಪಕ್ಷದಿಂದ ಹೊರಹೋಗಲು ಅಖಿಲೇಶ್ ಸಿದ್ಧರಾದರಾ? ಅಥವಾ ಕೊನೆಯ ಪ್ರಯತ್ನವಾಗಿ ತಂದೆಯೊಂದಿಗೆ ರಾಜಿಗೆ ಪ್ರಯತ್ನಿಸಿದರಾ? ಎಂಬ ವಿಷಯದ ಕುರಿತು ಸ್ಪಷ್ಟ ಮಾಹಿತಿಯಿಲ್ಲ.

ಪಕ್ಷ ಹೋಳಾಗುತ್ತದೆಯೇ? ಹಾಗಾದಾಗ ಅಖಿಲೇಶ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳ ನಡುವೆ, ಆಡಳಿತ ಪಕ್ಷ ವಿರೋಧಿ ಅಲೆಯ ಪರಿಣಾಮ ತಮ್ಮ ಮಗ ಅಖಿಲೇಶ್ ಮೇಲೆ ಬೀಳದಂತೆ ಮುಲಾಯಂ ಸಿಂಗ್ ಪಕ್ಷದ ಆಂತರಿಕ ಕಲಹಗಳೆಂಬ ನಾಟಕ ಸೃಷ್ಟಿಸಿದರಾ? ಎಂಬ ಅನುಮಾನಗಳೂ ಕೇಳಿಬರುತ್ತಿವೆ. ಈ ಕುರಿತು ಇನ್ನಷ್ಟು ಸ್ಪಷ್ಟತೆ ಸಿಗಬೇಕೆಂದರೆ ಭಾನುವಾರ ನಡೆಯಲಿರುವ ಪಕ್ಷದ ಸಮಾವೇಶದವರೆಗೂ ಕಾದು ನೋಡಬೇಕು.

Loading...

Leave a Reply

Your email address will not be published.

error: Content is protected !!