ಉಪಚುನಾವಣೆ: ಆಡಳಿತ ಪಕ್ಷಗಳಿಗೆ ಜನ ಮನ್ನಣೆ

ಆರು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನವೆಂಬರ್ 19 ರಂದು ನಡೆದ ಉಪಚುನಾವಣೆಗಳಲ್ಲಿ ಆಡಳಿತ ಪಕ್ಷಗಳಿಗೆ ಜನ ಮನ್ನಣೆ ನೀಡಿದ್ದಾರೆ. ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದಿದೆ. ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಎರಡು, ತೃಣಮೂಲ ಕಾಂಗ್ರೆಸ್ ಎರಡು ಸ್ಥಾನ ಗೆದ್ದಿವೆ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್, ತಮ್ಲುಕ್ ಲೊಕಸಭೆ ಕ್ಷೇತ್ರಗಳು ಮತ್ತು ಮೊಂಟೇಶ್ವರ್ ವಿಧಾನಸಭೆ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಅಸ್ಸಾಂನಲ್ಲಿನ ಲಖಿನ್‌ಪೂರ್ ಲೋಕಸಭಾ ಕ್ಷೇತ್ರ, ಭೈತಲಂಗ್ಸೋ ವಿಧಾನಸಭೆ ಕ್ಷೇತ್ರ, ಮಧ್ಯಪ್ರದೇಶದ ಶೋದಲ್ ಲೋಕಸಭೆ ಕ್ಷೇತ್ರ, ನೇಪನಗರ್ ವಿಧಾನಸಭೆ ಕ್ಷೇತ್ರಗಳನ್ನು ಆಡಳಿತ ಪಕ್ಷ ಬಿಜೆಪಿ ಗೆದ್ದಿದೆ.

ತಮಿಳುನಾಡಿನ ಅರವಕುರಿಚ್ಚಿ, ತಂಜಾವೂರು, ತಿರುಪ್ಪುರಗುಂಡ್ರಂ ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆದ್ದಿದೆ. ಪುದುಚ್ಚೇರಿಯಲ್ಲಿನ ನೆಲ್ಲಿತೋಪು ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ. ಅರುಣಾಚಲ ಪ್ರದೇಸಲ್ಲಿ ಹಯೂಲಿಯಾಂಗ್ ವಿಧಾನಸಭೆ ಕ್ಷೇತ್ರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮಾಜಿ ಸಿಎಂ ಕಲಿಕೋ ಪುಲ್ ಪತ್ನಿ ಡಸಾಂಗ್ಲು ಬಿಜೆಪಿ ಪರ ನಿಂತು ಗೆದ್ದಿದ್ದಾರೆ. ತ್ರಿಪುರದಲ್ಲಿ ಆಡಳಿತ ಪಕ್ಷ ಸಿಪಿಎಂ ಬರ್ಜಲ, ಖೋವಾಯ್ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದಿದೆ.