ಹೆಣ್ಣು ಭ್ರೂಣ ಹತ್ಯೆ ಮಾಡಲು ಗಂಡ ಮಾಡಿದ್ದ ಹೇಯ ಕೃತ್ಯ

ಹುಟ್ಟುವ ಮಗು ಹೆಣ್ಣು ಎಂದು ತಿಳಿದ ಗಂಡ, ತನ್ನ ಏಳು ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯ ಮೇಲೆ ಭ್ರೂಣ ಹೊರಬೀಳುವವರೆಗೂ ಒತ್ತಡ ಹಾಕಿ ಪತ್ನಿ ಮತ್ತು ಭ್ರೂಣವನ್ನು ಕೊಂದಿರುವ ಅಮಾನವೀಯ ಘಟನೆ ಮಂಗಳವಾರ ಲೂಧಿಯಾನಾದಲ್ಲಿ ನಡೆದಿದೆ. ಇರ್ವಿಂದರ್ ಸಿಂಗ್ ಎಂಬಾತನೇ ಈ ನೀಚಕೃತ್ಯ ಎಸಗಿದ್ದು, ಈತನ ಸಹೋದರ ನಿರ್ಮಲ್ ಸಿಂಗ್ ಈ ಕೃತ್ಯಕ್ಕೆ ಸಹಕರಿಸಿದ್ದಾನೆ.

ಪತಿಯ ಈ ಕೃತ್ಯದಿಂದ ಪತ್ನಿ ಸಾವನ್ನಪ್ಪಿದ್ದು, ನಂತರ ಪತ್ನಿಯ ಮೃತದೇಹ ಮತ್ತು ಭ್ರೂಣವನ್ನು ಇರ್ವಿಂದರ್ ಸಿಂಗ್ ಮತ್ತಾತನ ಸಹೋದರ ಮನೆಯ ಹತ್ತಿರದ ಜಾಗದಲ್ಲಿ ಗೋಣಿ ಚೀಲ ಮತ್ತು ಮಣ್ಣಿನಿಂದ ಮುಚ್ಚಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಭ್ರೂಣವನ್ನು ಕೊಲ್ಲುವ ಪ್ರಯತ್ನದಲ್ಲಿ ಮೊದಲು ಪತ್ನಿಗೆ ಕೈಗಳನ್ನು ಕಟ್ಟಿಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪತ್ನಿಯ ಮೃತದೇಹ ಮತ್ತು ಭ್ರೂಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿರ್ಮಲ್ ಸಿಂಗ್ ದಂಪತಿಗಳಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಎರಡನೇ ಮಗು ಗಂಡಾಗಬೇಕೆಂಬ ಬಯಕೆಯಿಂದ ಪತ್ನಿಯನ್ನು ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ. ಹೆಣ್ಣು ಮಗು ಅಂತ ಗೊತ್ತಾದ ಕೂಡಲೇ ಗರ್ಭಪಾತ ಮಾಡಿಸುತ್ತಿದ್ದ ಎಂದು ಮೃತ ಮಹಿಳೆಯ ತಂದೆ ಹೇಳಿದ್ದಾರೆ. ಪೊಲೀಸರು ಪತಿ ಮತ್ತು ಆತನ ಸಹೋದರನನ್ನು ಬಂಧಿಸಿದ್ದು, ಮಹಿಳೆಗೆ ಗರ್ಭಪಾತ ಮಾಡಿದ್ದ ವೈದ್ಯರಿಗೆ ಹುಡುಕಾಟ ನಡೆಸಿದ್ದಾರೆ.