ಕಂಬಳಕ್ಕಿದ್ದ ಅಡ್ಡಿ ನಿವಾರಣೆ, ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಹೊರಡಿಸಿದ್ದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಕ್ರೀಡೆಗಳಾದ ಕಂಬಳ, ಎತ್ತಿನಗಾಡಿ ಓಟ ಮತ್ತು ಹೋರಿ ಓಡಿಸುವ ಓಟಗಳಿಗೆ ಇದ್ದ ಅಡ್ಡಿ ತೊಲಗಿದಂತಾಗಿದೆ.

ಕೆಲ ಸ್ವಯಂಸೇವಾ ಸಂಸ್ಥೆಗಳು ಪ್ರಾಣಿ ಹಿಂಸೆಯ ನೆಪವೊಡ್ಡಿ ಕಂಬಳಕ್ಕೆ ವಿರೋಧ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದವು. ಕಂಬಳದ ಪರ ಹೆಚ್ಚಾದ ಒತ್ತಡದಿಂದ ರಾಜ್ಯ ಸರ್ಕಾರ “ಪ್ರಾಣಿ ಹಿಂಸೆ ತಡೆ ತಿದ್ದುಪಡಿ ವಿಧೇಯಕ 2017” ವನ್ನು ವಿಧಾನಮಂಡಲದಲ್ಲಿ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿತ್ತು. ನಂತರ ವಿಧೇಯಕವನ್ನು ರಾಜ್ಯಪಾಲರಿಗೆ ಕಳಹಿಸಲಾಗಿದ್ದು, ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ್ದರು. ಇದೀಗ ರಾಷ್ಟ್ರಪತಿಗಳ ಅಂಕಿತ ಬಿದ್ದಿರುವುದರಿಂದ ಕಂಬಳ ಮತ್ತಿತರೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಇದ್ದ ಅಡ್ಡ ನಿವಾರಣೆಯಾಗಿದೆ.