ರಾಷ್ಟ್ರಪತಿ ಚುನಾವಣೆ: ಸೋನಿಯಾರನ್ನು ಭೇಟಿ ಮಾಡಲಿರುವ ಬಿಜೆಪಿ – News Mirchi

ರಾಷ್ಟ್ರಪತಿ ಚುನಾವಣೆ: ಸೋನಿಯಾರನ್ನು ಭೇಟಿ ಮಾಡಲಿರುವ ಬಿಜೆಪಿ

ರಾಷ್ಟ್ರಪತಿ ಅಭ್ಯರ್ಥಿ ಗೆ ಸರ್ವಸಮ್ಮತ ವ್ಯಕ್ತಿಯನ್ನು ಆಯ್ಕೆ ಮಾಡಲು ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿ, ಎಲ್ಲಾ ಪಕ್ಷಗಳೊಂದಿಗೆ ಚರ್ಚೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದೆ. ಆದರೆ ಈಗಲೇ ಎನ್.ಡಿ.ಎ ಅಭ್ಯರ್ಥಿ ವಿರುದ್ಧ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿಯ ವಿರೋಧಿ ಪಕ್ಷಗಳನ್ನೆಲ್ಲಾ ಒಗ್ಗೂಡಿಸುತ್ತಿರುವ ಕಾಂಗ್ರೆಸ್ ಜೊತೆ ಮಾತುಕತೆ ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಹಾಗೆಯೇ ಬಿಜೆಪಿ ಸಮಿತಿಯು ಸಿಪಿಎಂ ನ ಸೀತಾರಾಂ ಯೆಚೂರಿ ಯವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದೆ.

ಜೂನ್ 12 ರಂದು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸುಗಮವಾಗುವಂತೆ ಇತರ ಪಕ್ಷಗಳ ಮನವೊಲಿಸಲು ಮೂವರು ಸದಸ್ಯರ ಸಮಿತಿಯೊಂದನ್ನು ಜೂನ್ 12ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಚಿಸಿದ್ದರು. ಗೃಹಸಚಿವ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯನಾಯ್ಡು ಈ ಸಮಿತಿಯಲ್ಲಿರುವ ಮೂವರು ಸಚಿವರು.

ಬುಧವಾರ ವೆಂಕಯ್ಯನಾಯ್ಡು ಬಿ.ಎಸ್.ಪಿ ಮುಖಂಡ ಸತೀಶ್ ಚಂದ್ರ ಮಿಶ್ರಾ ಮತ್ತು ಎನ್.ಸಿ.ಪಿ ಯ ಮುಖಂಡ ಪ್ರಫುಲ್ ಪಟೇಲ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆ. ಆದರೆ ಬಿಜೆಪಿ ಔಪಚಾರಿಕವಾಗಿ ತಮ್ಮನ್ನು ಭೇಟಿ ಮಾಡಿದ ನಂತರ ನಮ್ಮ ನಿಲುವು ತಿಳಿಸುತ್ತೇವೆ ಎಂದು ಎರಡೂ ಪಕ್ಷಗಳ ಮುಖಂಡರು ಹೇಳಿದ್ದಾರೆ.

ಮತ್ತೊಂದು ಕಡೆ ಪ್ರತಿಪಕ್ಷಗಳು ತಮ್ಮ ಕಡೆಯ ಅಭ್ಯರ್ಥಿ ಆಯ್ಕೆ ವಿಷಯವಾಗಿ ಇಂದು ಮಧ್ಯಾಹ್ನ ಸಭೆ ನಡೆಸಿ ಅನುಸರಿಸಬೇಕಾದ ತಂತ್ರಗಳನ್ನು ಚರ್ಚಿಸಿದ್ದಾರೆ.

ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, ಜೂನ್ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಜುಲೈ 20 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Loading...