ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ |News Mirchi

ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ

ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿ ವಿಷಯದಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇಂದು ಭಾರತೀಯ ಜನತಾ ಪಕ್ಷವು ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಬಿಹಾರದಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ರಾಮನಾಥ್ ಕೋವಿಂದ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದೆ.

70 ವರ್ಷ ವಯಸ್ಸಿನ ರಾಮನಾಥ್ ಅವರು ಕಾನ್ಪುರ ಪ್ರಬಲ ದಲಿತ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಅವರು ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸುಪ್ರೀಂ ಕೋರ್ಟ್ ವಕೀಲರಾಗಿಯೂ ಅವರು ಕೆಲಸ ಮಾಡಿದ್ದರು.

ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಎನ್.ಡಿ.ಎ ಮೈತ್ರಿಕೂಟ ಪಕ್ಷವಾಗಿರುವ ಶಿವಸೇನೆ, ಬಿಜೆಪಿ ನಡುವಳಿಕೆಗೆ ಬೇಸರ ವ್ಯಕ್ತಪಡಿಸಿದೆ. ರಾಷ್ಟ್ರಪತಿ ಅಭ್ಯರ್ಥಿ ವಿಚಾರವಾಗಿ ಇತರೆ ಪಕ್ಷಗಳೊಂದಿಗೆ ಚರ್ಚಿಸಲು ಬಿಜೆಪಿ ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಅಮಿತ್ ಶಾ ಕೆಲವು ನಾಯಕರನ್ನು ಭೇಟಿ ಮಾಡಿದ್ದರು. ಆದರೆ ಭೇಟಿಯಲ್ಲಿ ಯಾವುದೇ ಅಭ್ಯರ್ಥಿಯ ಹೆಸರನ್ನು ಚರ್ಚಿಸಿಲ್ಲ, ಹೀಗಿದ್ದಾಗ ಸಮಿತಿ ರಚಿಸುವ ಅಗತ್ಯವಾದರೂ ಏನಿತ್ತು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಬಿಜೆಪಿ ಎನ್.ಡಿ.ಎ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಅತಿ ದೊಡ್ಡ ಪಕ್ಷ, ಆ ಪಕ್ಷಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ನಾವು ಪ್ರಧಾನಿ ಮೋದಿಯವರಲ್ಲಿ ವಿಶ್ವಾಸವಿರಿಸಿದ್ದೆವು. ಆದರೆ ಬಿಜೆಪಿ ಅಭ್ಯರ್ಥಿಯ ಹೆಸರನ್ನು ನಮ್ಮ ಜೊತೆ ಚರ್ಚಿಸಬೇಕಿತ್ತು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿಗಳ ಕುರಿತು ಚರ್ಚಿಸಲು ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸೋಮವಾರ ಸಭೆ ಸೇರಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಮುಂತಾದವರು ಭಾಗವಿಸಿದ್ದರು.

 

Loading...
loading...
error: Content is protected !!