ಇಸ್ರೋ ಮಾಜಿ ಅಧ್ಯಕ್ಷ ಯು.ಆರ್.ರಾವ್ ನಿಧನ

ಬೆಂಗಳೂರು: ಪ್ರಸಿದ್ಧ ವಿಜ್ಞಾನಿ ಪ್ರೊಫೆಸರ್ ಉಡುಪಿ ರಾಮಚಂದ್ರರಾವ್(85) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಕಳೆದ ವರ್ಷ ಹೃದಯ ಸಂಬಂಧಿ ವ್ಯಾಧಿಯಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ 2:30 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

1984-94 ರ ನಡುವೆ ಇಸ್ರೋ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದರು. ಕೆಲ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಯು.ಆರ್.ರಾವ್ ವಿಜ್ಞಾನಿಯಾಗಿ ಹತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸದ್ಯ ಫಿಜಿಕಲ್ ರಿಸರ್ಚ್ ಲ್ಯಾಬೊರೇಟರಿ ಆಡಳಿತ ವಿಭಾಗದ ಅಧ್ಯಕ್ಷರಾಗಿಯೂ, ತಿರುವನಂತಪುರಂ ನ ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಚಾನ್ಸಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸತೀಶ್ ಧವನ್ ನಂತ ಹತ್ತು ವರ್ಷಗಳ ಕಾಲ ಇಸ್ರೋಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ರಾವ್ ಅವರೊಬ್ಬರೇ. ಮಾಮ್ ಮಿಷನ್ ಗಾಗಿ ಇಸ್ರೋದೊಂದಿಗೆ ಸೇರಿ ಅವರು ಕೆಲಸ ಮಾಡಿದ್ದರು ಎಂದು ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. ಇನ್ನು ಅವರು ಇಲ್ಲ ಎಂದು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದೆ ಎಂದು ವಿಜ್ಞಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ರಾವ್ ಅವರು ನೀಡಿದ ಸೇವೆಗಳನ್ನು ಗುರುತಿಸಿದ ಭಾರತ ಸರ್ಕಾರ ಈ ಜನವರಿಯಲ್ಲಿ ಅವರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರಕಟಿಸಿತ್ತು.

ಈ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ರಾವ್ ಅವರು, ನನ್ನ ನಿಧನದ ನಂತರ ಪುರಸ್ಕಾರ ಬರುತ್ತದೆ ಎಂದುಕೊಂಡಿದ್ದೆ ಎಂದು ಹೇಳಿದ್ದರು. ಯು.ಆರ್.ರಾವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.