ಪದ್ಮಾವತಿ ಚಿತ್ರದ ಟ್ರೇಲರ್ ಪ್ರದರ್ಶಿಸಿದ ಚಿತ್ರಮಂದಿರ ಧ್ವಂಸ – News Mirchi

ಪದ್ಮಾವತಿ ಚಿತ್ರದ ಟ್ರೇಲರ್ ಪ್ರದರ್ಶಿಸಿದ ಚಿತ್ರಮಂದಿರ ಧ್ವಂಸ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಚಿತ್ರ “ಪದ್ಮಾವತಿ” ಮೇಲಿನ ಆಕ್ರೋಶ ಹಿಂಸಾಚಾರಕ್ಕೆ ಮಂಗಳವಾರ ತಿರುಗಿದೆ. ಚಿತ್ರದ ಟ್ರೇಲರ್ ಪ್ರಸಾರ ಮಾಡಿದ ಕಾರಣಕ್ಕೆ ರಾಜಸ್ಥಾನದ ಚಿತ್ರಮಂದಿರದ ಮೇಲೆ ಗುಂಪೊಂದು ದಾಳಿ ನಡೆಸಿದೆ. ದಾಳಿ ನಡೆಸಿದರುವ ರಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ.

ರಾಣಿ ಪದ್ಮಾವತಿಯ ಇತಿಹಾಸವನ್ನು ತಿರುಚಿ ಚಿತ್ರ ನಿರ್ದೇಶಿಸಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಒಂದು ಪಾಠ ಕಲಿಸುತ್ತೇನೆ ಎಂದು ಇತ್ತೀಚೆಗಷ್ಟೇ ರಜಪೂತ್ ಕರ್ಣಿ ಸೇನಾ ಅಧ್ಯಕ್ಷ ಅಜಿತ್ ಮಾಮ್ದೋಲಿ ಎಚ್ಚರಿಸಿದ್ದರು.

ಈ ದಾಳಿಗೆ ಸಂಬಂಧಿಸಿದ ವೀಡಿಯೋ ಒಂದು ಹರಿದಾಡುತ್ತಿದ್ದು, ಕರ್ಣಿ ಸೇನಾ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಕಿಟಿ ಮತ್ತು ಗಾಜಿನ್ ಟಿಕೆಟ್ ಕೌಂಟರ್ ಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ, ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಕಾನೂನನ್ನು ಕೈಗೆತ್ತಿಕೊಂಡರೆ ಅವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಕಟಾರಿಯಾ ಹೇಳಿದ್ದಾರೆ.

ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಿರುವ ಪದ್ಮಾವತಿ ಚಿತ್ರ ಆರಂಭದಿಂದ ತೀವ್ರ ವಿರೋಧಗಳನ್ನು ಎದುರಿಸುತ್ತಿದೆ. ರಾಣಿ ಪದ್ಮಾವತಿ ಮತ್ತು ಖಿಲ್ಜಿ ನಡುವೆ ಪ್ರೀತಿ ಇತ್ತೆಂಬಂತೆ ಚಿತ್ರಿಸಿರುವುದು ರಜಪೂತರು ಮತ್ತು ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 27 ರಂದು ರಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಚಿತ್ರೀಕರಣ ಸ್ಥಳದಲ್ಲಿಯೇ ನಿರ್ದೇಶಕ ಬನ್ಸಾಲಿ ಅವರ ಮೇಲೆ ಹಲ್ಲೆ ನಡೆಸಿ ಪದ್ಮಾವತಿ ಸೆಟ್ ಅನ್ನು ಧ್ವಂಸಗೊಳಿಸಿದರು. ಈ ಘಟನೆಯ ನಂತರ ಚಿತ್ರೀಕರಣವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಮಾರ್ಚ್ 15 ರಂದು ಕೊಲ್ಹಾಪುರದಲ್ಲಿ ಪದ್ಮಾವತಿ ಸೆಟ್ ಅನ್ನು ಧ್ವಂಸಗೊಳಿಸಲಾಗಿತ್ತು. ಅಂದಿನಿಂದ ಈ ಚಿತ್ರಕ್ಕೆ ನಿರಂತರವಾಗಿ ವಿರೋಧಗಳು, ಆಕ್ರೋಶಗಳು ವ್ಯಕ್ತವಾಗುತ್ತಲೇ ಇವೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!