ಬಿಜೆಪಿ ನಾಯಕರ ನಡುವಿನ ಬಿರುಕು: ಕಾರ್ಯಕಾರಿಣಿಯಲ್ಲೂ ಪ್ರದರ್ಶನ

ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಈಶ್ವರಪ್ಪ ಮತ್ತು ಯಡಿಯೂರಪ್ಪನವರ ನಡುವಿನ ಬಿರಕು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವುದರೊಂದಿಗೆ ಮುಕ್ತಾಯಗೊಂಡಿದೆ. ಇಬ್ಬರೂ ನಾಯಕರು ಸಾರ್ವಜನಿಕವಾಗಿ ಪರಸ್ಪರ ಆರೋಪ ಮಾಡಿದ್ದಾರೆ.

ಪಕ್ಷದ ನೇತೃತ್ವದ ಕಾರ್ಯಕ್ರಮಗಳಲ್ಲಿ ಮಾತ್ರ ಬಿಜೆಪಿ ನಾಯಕರು ಭಾಗವಹಿಸಬೇಕು, ಇದನ್ನು ಮೀರಿದರೆ ನಾನು ಸಹಿಸುವುದಿಲ್ಲ ಎಂದು ಕಾರ್ಯಕಾರಿಣಿ ಮುಗಿದ ನಂತರ ಈಶ್ವರಪ್ಪನವರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ತಮ್ಮನ್ನು ಪಕ್ಷಾತೀತ ಸಂಘಟನೆಯಾದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜನವರಿ 26 ರಂದು ಕೂಡಲಸಂಗಮದಲ್ಲಿ ರಾಯಣ್ಣ ಬ್ರಿಗೇಡ್ ಆಯೋಜಿಸಿರುವ ಬೃಹತ್ ರ‌್ಯಾಲಿಯಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ.

ದಲಿತ ಮತ್ತು ಹಿಂದುಳಿದ ವರ್ಗಗಳನ್ನು ಒಂದುಗೂಡಿಸಿ ನ್ಯಾಯ ದೊರಕಿಸಿಕೊಡುವ ಗುರಿಯೊಂದಿಗೆ ರಾಯಣ್ಣ ಬ್ರಿಗೇಡ್ ಸ್ಥಾಪನೆಯಾಗಿದೆ. ಈ ಕುರಿತು ಪಕ್ಷದ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರೂ ಅದನ್ನು ಒಪ್ಪಿದ್ದಾರೆ, ಕೇವಲ ಯಡಿಯೂರಪ್ಪ ಮಾತ್ರ ಬ್ರಿಗೇಡ್ ಉದ್ದೇಶಗಳ ಅರಿವಿಲ್ಲದೆ ವಿರೋಧಿಸುತ್ತಿದ್ದಾರೆ ಎಂದರು.

ಕಾರ್ಯಕಾರಿಣಿ ಸಭೆಯ ಎರಡನೇ ದಿನ ಯಡಿಯೂರಪ್ಪ ಅವರಿಗೆ ಈಶ್ವರಪ್ಪನವರ ಪಕ್ಕದ ಸೀಟು ನೀಡಲಾಗಿತ್ತು. ಆದರೆ ಈಶ್ವರಪ್ಪನವರ ಪಕ್ಕ ಕುಳಿತುಕೊಳ್ಳಲು ನಿರಾಕರಿಸಿದ ಯಡಿಯೂರಪ್ಪ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರ ಕುರ್ಚಿಯಲ್ಲಿ ಕೂತರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ದೇಶ ಮತ್ತು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ, ನಾವು ನಮ್ಮ ಸಮಸ್ಯೆಗಳಿಂದ ಅವರಿ ತೊಂದರೆ ಕೊಡಬಾರದು, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು. ಸಮಸ್ಯೆ ಬಗೆಹರಿಸಿಕೊಳ್ಳಲು ನಾನು ಯಾರೊಂದಿಗಾದರೂ ಚರ್ಚೆಗೆ ಸಿದ್ಧನಿದ್ದೇನೆ, ನನಗೆ ಅಹಂ ಇಲ್ಲ ಎಂದರು.

Related News

Loading...

Leave a Reply

Your email address will not be published.

error: Content is protected !!