ಎವರೆಸ್ಟ್ ಏರಿದ್ದ ಪೊಲೀಸ್ ದಂಪತಿ, ತನಿಖೆಯಲ್ಲಿ ಬಯಲಾಯಿತು ಸತ್ಯ

ಪುಣೆ: ಅತಿ ಎತ್ತರದ ಎವರೆಸ್ಟ್ ಶಿಖರ ಏರಿದ್ದೆವು ಎಂದು ಎಲ್ಲರನ್ನೂ ನಂಬಿಸಿದ್ದ ಪೊಲೀಸ್ ದಂಪತಿಯ ಬಂಡವಾಳ ಈಗ ಬಯಲಾಗಿದೆ.

ಕಳೆದ ಮೇ ತಿಂಗಳಲ್ಲಿ ಎವರೆಸ್ಟ್ ಏರಲು ಹೊರಟಿದ್ದೇವೆ ಎಂದು ಪೊಲೀಸ್ ಇಲಾಖೆಯಿಂದ ರಜೆ ಪಡೆದು ತಾರಕೇಶ್ವರಿ, ದಿನೇಶ್ ರಾಥೋಡ್ ಹೋಗಿದ್ದರು. ನಂತರ ಜೂನ್ 5 ರಂದು ಶಿಖರವೇರಿದ್ದೇವೆ ಎಂದು ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದರು. ಈ ಮೂಲಕ ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ ದಂಪತಿ ಎಂದು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರನ್ನೂ ಇವರು ನಂಬಿಸಿದ್ದರು. ಇದಕ್ಕಾಗಿ ಎವರೆಸ್ಟ್ ಶಿಖರವೇರಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರ ಚಿತ್ರವನ್ನು ಮಾರ್ಫಿಂಗ್ ಮಾಡಿ ತೋರಿಸಿದ್ದರು.

ಈ ಫೋಟೋ ನೋಡಿದ್ದ ವ್ಯಕ್ತಿ ಅದು ತನ್ನ ಫೋಟೋ ಆಗಿದ್ದು ಮಾರ್ಫಿಂಗ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಮತ್ತೆ ಕೆಲವರು ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇಲಾಖೆಯ ವಿಚಾರಣೆಯಲ್ಲಿ ಇವರು ಹೇಳಿದ ಉತ್ತರಗಳು ತಾಳೆಯಾಗದೆ ಪೊಲೀಸ್ ದಂಪತಿಗಳ ಮಾತು ಸುಳ್ಳು ಎಂದು ಸಾಬೀತಾಗಿದೆ. ಅಂದು ಶಿಖರವೇರಿದ್ದ ತಂಡದಲ್ಲಿ ಶ್ರೀಹರಿ ತಾಷ್ಕಿರ್ ಎಂಬ ವ್ಯಕ್ತಿ ಮಾತ್ರ ಶಿಖರದ ತುದಿ ತಲುಪಿದ್ದರು ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಇಬ್ಬರನ್ನೂ ಅಮಾನತು ಮಾಡಿದೆ.

ಈ ದಂಪತಿಗಳಿಬ್ಬರನ್ನೂ ಮುಂದಿನ ಹತ್ತು ವರ್ಷಗಳ ಕಾಲ ಎವರೆಸ್ಟ್ ಏರದಂತೆ ನೇಪಾಳ ಸರ್ಕಾರ ಈಗಾಗಲೇ ನಿಷೇಧ ವಿಧಿಸಿದೆ.