42 ಪಂಜಾಬ್ ಕಾಂಗ್ರೆಸ್ ಶಾಸಕರ ರಾಜೀನಾಮೆ

ಚಂಡೀಘಡ: ಸಟ್ಲೆಜ್ – ಯಮುನಾ ಲಿಂಕ್(ಎಸ್‌ವೈಎಲ್) ಕಾಲುವೆ ನೀರಿನ ವಿವಾದ ಪಂಜಾಬ್ ನಲ್ಲಿ ರಾಜಕೀಯ ಕಂಪನ ಸೃಷ್ಟಿಸಿದೆ. ಎಸ್‌ವೈ‌ಎಲ್ ನೀರು ಬಳಕೆಯಲ್ಲಿ ಹರಿಯಾಣಕ್ಕೆ ಅನುಕೂಲವಾಗುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ಪಂಜಾಬ್ ನ 42 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರಗಳನ್ನು ಶುಕ್ರವಾರ ವಿಧಾನಸಭೆ ಕಾರ್ಯದರ್ಶಿಗೆ ನೀಡಿದರು.

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪಂಜಾಬ್ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಗುರುವಾರ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಂಗ್ರೆಸ್ ಶಾಸಕರನ್ನೂ ರಾಜೀನಾಮೆ ನೀಡುವಂತೆ‌ ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು.

ಶೀಘ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪಿನಿಂದಾಗಿ ಈಗಿನಿಂದಲೇ ಚುನಾವಣೆ ರಾಜಕೀಯ ಆರಂಭವಾಗಿದೆ. ಎಸ್‌ವೈಎಲ್ ವಿವಾದದಕುರಿತು 2004 ರಲ್ಲಿ ಪಂಜಾಬ್ ಸರ್ಕಾರ ತಂದಿದ್ದ ‘ಪಂಜಾಬ್ ಟರ್ಮಿನೇಷನ್ ಆಫ್ ಅಗ್ರಿಮೆಂಟ್’ ಕಾಯ್ದೆ ಸಂವಿಧಾನ ವಿರುದ್ಧ ಎಂದು ಐದು ಸದಸ್ಯರ ನ್ಯಾಯಪೀಠ ಗುರುವಾರ ಸ್ಪಷ್ಟಪಡಿಸಿತು. ಈ ಕಾಯ್ದೆ ಪ್ರಕಾರ ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಜಮ್ಮು ಕಾಶ್ಮೀರ, ದೆಹಲಿ ರಾಜ್ಯಗಳೊಂದಿಗೆ ನೀರು ಹಂಚಿಕೆ ವಿಷಯದಲ್ಲಿ ಪಂಜಾಬ್ ಏಕಪಕ್ಷೀಯವಾಗಿ ನಡೆದುಕೊಳ್ಳಬಹುದಾಗಿತ್ತು.