ರಾಜಕುಮಾರನ ಮನೆಗೆ ರಾಹುಲ್ ಭೇಟಿಯ ಹಿಂದಿನ ಮರ್ಮವೇನು?

ಮುಚ್ಚಿಹೋಗಿದ್ದ ತಮ್ಮ ಪಕ್ಷದ ಪತ್ರಿಕೆಗೆ ಮರುಚಾಲನೆ ನೀಡಲು ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುನೀತ್ ರಾಜ್ ಕುಮಾರ್ ರವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್, ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರ ಕುಟುಂಬ ಸದಸ್ಯರು ಹಾಜರಿದ್ದರು. ಪಾರ್ವತಮ್ಮ ರಾಜ್ ಕುಮಾರ್ ರವರ ನಿಧನದ ಹಿನ್ನೆಲೆಯಲ್ಲಿ ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್ ಹೋಗಿದ್ದರು ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ರಾಹುಲ್ ರನ್ನು ರಾಜ್ ಪುತ್ರನ ಮನೆಗೆ ಕರೆದೊಯ್ದಿದ್ದರ ಹಿಂದೆ ಮತ್ತೊಂದು ಕಾರಣವೂ ಇದೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿವಮೊಗ್ಗದಲ್ಲಿ ಈಗ ಕಾಂಗ್ರೆಸ್ ಗೆ ಹೇಳಿಕೊಳ್ಳುವಂತ ಬಲವಿಲ್ಲ. ಬಂಗಾರಪ್ಪ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಜೊತೆ ಸೇರಿದ್ದರೆ, ಮಧು ಬಂಗಾರಪ್ಪ ಜೆಡಿಎಸ್ ಆಶ್ರಯದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತೆ ತನ್ನ ಬಲ ವೃದ್ಧಿಸಿಕೊಳ್ಳಬೇಕೆಂದರೆ ಬಂಗಾರಪ್ಪ ಕುಟುಂಬ ಸದಸ್ಯರೊಬ್ಬರು ಇದ್ದರೆ ಉತ್ತಮ ಎಂದು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ.

ಹೀಗಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಬಂಗಾರಪ್ಪ ಕುಟುಂಬದ ಮತ್ತೊಬ್ಬರೆಂದರೆ ಅದು ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ಶಿವರಾಜ್ ಕುಮಾರ್. ಈ ಹಿಂದೆ ಜೆಡಿಎಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದ ಗೀತಾ ಶಿವರಾಜ್ ಕುಮಾರ್ ರವರನ್ನು ಪಕ್ಷಕ್ಕೆ ಸೆಳೆದರೆ ಉತ್ತಮ ಎಂದು ರಾಜ್ಯ ನಾಯಕರು ರಾಹುಲ್ ಗಮನಕ್ಕೆ ತಂದಿದ್ದಲ್ಲದೆ, ಗೀತಾ ಶಿವರಾಜ್ ಕುಮಾರ್ ಅವರನ್ನು ರಾಹುಲ್ ಗಾಂಧಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಲೋಕಸಭಾ ಅಭ್ಯರ್ಥಿಯಾಗುತ್ತಾರಾ ಗೀತಾ ಶಿವರಾಜ್ ಕುಮಾರ್ ಎಂದು ಈಗಲೇ ಚರ್ಚೆ ಶುರುವಾಗಿದೆ. [ಸೇನಾ ಮುಖ್ಯಸ್ಥರ ಹೇಳಿಕೆಯೇ ವಿವಾದಕ್ಕೆ ಕಾರಣ: ಬೃಂದಾ ಕಾರಟ್]

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಶಿವರಾಜ್ ಕುಮಾರ್, ಇದು ಕೇವಲ ಸೌಜನ್ಯದ ಭೇಟಿ, ಅಮ್ಮನ ನಿಧನ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದರು, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.