ಭಾರತದ 14ನೇ ರಾಷ್ಟ್ರಪತಿಯಾಗಿ ಕೋವಿಂದ್… ಮೀರಾ ವಿರುದ್ಧ ಭರ್ಜರಿ ಗೆಲುವು

ನವದೆಹಲಿ: ಭಾರತದ ನೂತನ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರ ವಿರುದ್ಧ 3.35 ಲಕ್ಷ ಮೌಲ್ಯದ ಮತಗಳಿಂದ ಕೋವಿಂದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎನ್ಡಿಎ ಮೈತ್ರಿಪಕ್ಷಗಳ ಪರವಾಗಿ ಕಣಕ್ಕಿಳಿದಿದ್ದ ರಾಮನಾಥ್ ಕೋವಿಂದ್ ಅವರಿಗೆ 7,02,643 ಮೌಲ್ಯದ ಮತಗಳು ಬಿದ್ದರೆ, ಪ್ರತಿಸ್ಪರ್ಧಿ ಮೀರಾ ಕುಮಾರ್ ಅವರಿಗೆ 3,67,114 ಮೌಲ್ಯದ ಮತಗಳು ಬಂದಿವೆ. ಒಟ್ಟು ಮತಗಳ ಮೌಲ್ಯದಲ್ಲಿ ರಾಮನಾಥ್ ಕೋವಿಂದ್ ಅವರಿಗೆ ಶೇ.65.65 ರಷ್ಟು ಮತ ಬಂದಿದ್ದರೆ, ಮೀರಾ ಕುಮಾರ್ ಅವರಿಗೆ ಶೇ.34.35 ರಷ್ಟು ಮತಗಳು ಬಿದ್ದಿವೆ.

ಸಂಸತ್ತಿನಲ್ಲಿ ನಡೆದ ಮತದಾನವನ್ನು ಗಮನಿಸುವುದಾದರೆ ರಾಮನಾಥ್ ಕೋವಿಂದ್ ಅವರಿಗೆ ಬಂದಿದ್ದು 3,69,576. ಇನ್ನು ಮೀರಾ ಕುಮಾರ್ ಅವರಿಗೆ 1,59,300 ಮತಗಳ ಬಂದಿವೆ. ಒಟ್ಟು ಮತಗಳಲ್ಲಿ 21 ಮತಗಳು ಅನರ್ಹವಾಗಿವೆ. ಕೋವಿಂದ್ ಅವರ ಗೆಲುವನ್ನು ರಿಟರ್ನಿಂಗ್ ಅಧಿಕಾರಿ ಪ್ರಕಟಿಸಿದ್ದಾರೆ.

ಚುನಾವಣೆಗೂ ಮುನ್ನವೇ ರಾಮನಾಥ್ ಕೋವಿಂದ್ ಅವರ ಗೆಲುವು ಖಚಿತ ಎಂದು ಹೇಳಲಾಗುತ್ತಿತ್ತು. ಉಭಯ ಸಭೆಗಳಲ್ಲಿರುವ ಎನ್ಡಿಎ ಪಕ್ಷಗಳ ಸದಸ್ಯರ ಜೊತೆಗೆ ವೈಸಿಪಿ, ಟಿ.ಆರ್.ಎಸ್, ಅಣ್ಣಾಡಿಎಂಕೆ ಕೂಡಾ ಎನ್.ಡಿ.ಎ ಗೆ ಬೆಂಬಲಿಸಿದ್ದರಿಂದ ಕೋವಿಂದ್ ಅವರು ರಾಷ್ಟ್ರಪತಿಯಾಗುವುದು ಈ ಹಿಂದೆಯೇ ಬಹುತೇಕ ಖಚಿತವಾಗಿತ್ತು. ಮತ ಎಣಿಕೆ ಆರಂಭವಾದಾಗಿನಿಂದಲೂ ಕೋವಿಂದ್ ಅವರು ಭಾರೀ ಮುನ್ನಡೆ ಕಾಯ್ದುಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ಯಾವುದೇ ಸಂದರ್ಭದಲ್ಲೂ ಕೋವಿಂದ್ ಅವರಿಗೆ ಪ್ರಬಲ ಸ್ಪರ್ಧೆ ನೀಡಲಿಲ್ಲ.

ರಾಮನಾಥ್ ಗೆಲುವಿನಿಂದಾಗಿ ದೆಹಲಿ ಸೇರಿದಂತೆ ಕಾನ್ಪುರದ ಕೋವಿಂದ್ ಅವರ ನಿವಾಸದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತೋಷ ಹಂಚಿಕೊಂಡರು. ಕೋವಿಂದ್ ಅವರಿಗೆ ಬೆಂಬಲ ನೀಡದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕರು ಮುಂತಾದವರು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.