ಬಿಹಾರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಕೋವಿಂದ್ – News Mirchi

ಬಿಹಾರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಕೋವಿಂದ್

ನವದೆಹಲಿ: ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್.ಡಿ.ಎ ಮೈತ್ರಿಕೂಟದಿಂದ ಆಯ್ಕೆಯಾದ ಮರುದಿನವೇ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕೋವಿಂದ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಕೋವಿಂದ್ ಅವರ ರಾಜೀನಾಮೆಯಿಂದ ತೆರವಾದ ಬಿಹಾರ ರಾಜ್ಯಪಾಲ ಹುದ್ದೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿ ಅವರು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ. ಇದಕ್ಕೂ ಮುನ್ನ ಕೋವಿಂದ್ ಅವರು ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ರವರನ್ನು ಭೇಟಿ ಮಾಡಿದರು.

ಬಿಹಾರ ರಾಜ್ಯಪಾಲರಾಗುವುದಕ್ಕೂ ಮೊದಲು ಉತ್ತರ ಪ್ರದೇಶದಿಂದ ಎರಡು ಬಾರಿ ಕೋವಿಂದ್ ಅವರು ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. 2015 ರಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಆರಂಭವಾಗುವುದಕ್ಕೂ ಮುನ್ನ ಬಿಹಾರ ರಾಜ್ಯಪಾಲರಾಗಿ ನೇಮಕವಾಗಿದ್ದರು. ಇದೀಗ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಆಯ್ಕೆಯಾಗಿರುವುದು ಬಿಜೆಪಿ ಸೇರಿದಂತೆ ಇತರೆ ವಿರೋಧಿ ಪಾಳೆಯದಲ್ಲೂ ಅಚ್ಚರಿಗೆ ಕಾರಣವಾಗಿದೆ. ಕೋವಿಂದ್ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ, ಪ್ರತಿಪಕ್ಷಗಳೂ ಬೆಂಬಲಿಸುತ್ತವೆ ಎಂಬ ವಿಶ್ವಾಸದಲ್ಲಿದೆ ಬಿಜೆಪಿ. ಆದರೆ ಪ್ರತಿಪಕ್ಷ ನಾಯಕರೊಂದಿಗೆ ಅಭ್ಯರ್ಥಿಯ ಹೆಸರು ಚರ್ಚಿಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರತಿಪಕ್ಷಗಳಿಂದ ಅಭ್ಯರ್ಥಿಯನ್ನು ನಿಲ್ಲಿಸುವ ಕುರಿತು ಜೂನ್ 22 ರಂದು ಸಭೆ ಸೇರಿ ತೀರ್ಮಾನಿಸುವುದಾಗಿ ಹೇಳಿದೆ. ಮತ್ತೊಂದು ಕಡೆ ಬಿ.ಎಸ್.ಪಿ ಯ ಮಾಯಾವತಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Loading...