ವಿಮಾನ ತಡೆದು ಇಲಿ ಹಿಡಿದಾಗ…

ನವದೆಹಲಿ: ಇನ್ನೇನು ಟೇಕ್ ಆಫ್ ಆಗಬೇಕಿದ್ದ ವಿಶ್ವದಲ್ಲಿಯೇ ಅತ್ಯಂತ ದೂರ ಪ್ರಯಾಣಿಸುವ ದೆಹಲಿ-ಸ್ಯಾನ್ ಪ್ರಾನ್ಸಿಸ್ಕೋ ಏರ್ ಇಂಡಿಯಾ-173 ವಿಮಾನವನ್ನು ತಡೆದು ಸಿಬ್ಬಂದಿ ಇಲಿ ಹಿಡಿದ ಘಟನೆ ವರದಿಯಾಗಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 200 ಜನ ಪ್ರಯಾಣಿಕರನ್ನು ಹೊತ್ತು ತೆರಳಬೇಕಿದ್ದ ವಿಮಾನದಲ್ಲಿ ಕೊನೆ ಗಳಿಗೆಯಲ್ಲಿ ಇಲಿಯೊಂದು ಕಾಣಿಸಿಕೊಂಡಿದೆ. [ಇದನ್ನೂ ಓದಿ:ಡೊಕ್ಲಾಮ್ ವಿವಾದಕ್ಕೆ ತೆರೆ, ಸೇನೆ ಹಿಂತೆಗೆದಕ್ಕೆ ಚೀನಾ-ಭಾರತ ಅಂಗೀಕಾರ]

ಹೀಗಾಗಿ ವಿಮಾನದಲ್ಲಿದ್ದ ಪ್ರಯಾಣಿಕರನ್ನೆಲ್ಲಾ ಇಳಿಸಿ ಆ ಇಲಿಗಾಗಿ ಸಿಬ್ಬಂದಿಯಿಂದ ಹುಡುಕಾಟ ಶುರುವಾಯಿತು. ಒಂದೆರಡಲ್ಲ, ಸುಮಾರು 6 ಗಂಟೆಗಳ ಕಾಲ ಪ್ರಯತ್ನದ ನಂತರ ಸಿಬ್ಬಂದಿಗೆ ಇಲಿ ಹಿಡಿಯಲು ಸಾಧ್ಯವಾಯಿತು.

ಇಲಿ ಸಿಕ್ಕಿತು ಇನ್ನಾದರೂ ಹೊರಡಬಹುದು ಅಂದುಕೊಂಡರೆ ಮತ್ತೊಂದು ಸಮಸ್ಯೆ. ಅಷ್ಟು ಹೊತ್ತು ಡ್ಯೂಟಿಯಲ್ಲಿದ್ದ ವಿಮಾನದ ಪೈಲಟ್ ಮತ್ತಿತರೆ ಸಿಬ್ಬಂದಿಯನ್ನು ಕರ್ತವ್ಯದ ಅವಧಿ ಮುಗಿದ ಕಾರಣ ಮುಂದುವರೆಸಲು ನಿಯಮಗಳು ಒಪ್ಪುವುದಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತೊಂದು ತಂಡವನ್ನು ಕರೆಸಬೇಕಾಯಿತು. ಬೇರೆ ತಂಡ ಬರಲು ಮತ್ತೆ 3 ಗಂಟೆಗಳು ಹಿಡಿಯಿತು. ಇವೆಲ್ಲದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಕೊನೆಗೂ ಭಾನುವಾರ ಮಧ್ಯಾಹ್ನದ ನಂತರ ವಿಮಾನ ತಲುಪಬೇಕಾದ ಸ್ಥಳಕ್ಕೆ ತಲುಪಿತು.

ಇಲಿಗಳು ವಿಮಾನದಲ್ಲಿನ ಎಲೆಕ್ಟ್ರಿಕ್ ವೈರ್ ಗಳನ್ನು ಕಡಿದರೆ, ಪೈಲಟ್ ಗಳು ವಿಮಾನದ ಮೇಲಿನ ನಿಯಂತ್ರಣ ಸಾಧಿಸಲು ಕಷ್ಟವಾಗಬಹುದು. ಹೀಗಾಗಿ ಇದು ದುರಂತಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ ಎಂದು ಹಿರಿಯ ಕಮಾಂಡರ್ ಹೇಳಿದ್ದಾರೆ.