ಪೊಲೀಸರು ಬಯಸಿದರೆ ಶರಣಾಗಲು ಸಿದ್ಧ : ಹಾರ್ಧಿಕ್ ಪಟೇಲ್

ನ್ಯಾಯಾಲಯವು ತನ್ನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪಟೀದಾರ್ ಆಂದೋಲನ್ ನಾಯಕ ಹಾರ್ಧಿಕ್ ಪಟೇಲ್, ಶರಣಾಗಲು ತಾನು ಸಿದ್ಧ, ಆದರೆ ತಾನು ಜೈಲಿಗೆ ಹೋದರೂ ತನ್ನ ಚಳುವಳಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ಶಾಸಕರ ಕಛೇರಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸತತ ಗೈರು ಹಾಜರಾದ ಕಾರಣಕ್ಕೆ ನ್ಯಾಯಾಲಯ ಹಾರ್ಧಿಕ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

ಪೊಲೀಸರು ತನ್ನನ್ನು ಬಂಧಿಸಲು ಬಯಸಿದರೆ ನಾನು ಶರಣಾಗಲು ನಾನು ಸಿದ್ಧ, ಎಂದು ಪೊಲೀಸರು ಹಾರ್ಧಿಕ್ ನನ್ನು ಶೀಘ್ರದಲ್ಲೇ ಬಂಧಿಸುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ. ಇದು ಮೀಸಲಾತಿಗಾಗಿ ಹೋರಾಡುತ್ತಿರುವ ಪಟೀದಾರ್ ಚಳುವಳಿಯಿಂದ ಗುಜರಾತ್ ಭಾರತೀಯ ಜನತಾ ಪಕ್ಷವು ಎಷ್ಟು ಹೆದರಿದೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಹೋರಾಟದ ವೇಳೆ ಹಿಂಸಾಚರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಹಾರ್ಧಿಕ್ ಪಟೇಲ್ ಮೇಲಿವೆ. ಶನಿವಾರ ಹಾರ್ಧಿಕ್ ನನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತಮ್ಮ ಜೊತೆ ಕೈಜೋಡಿಸುವಂತೆ ಆಹ್ವಾನಿಸಿದ್ದಾರೆ. ಗುಜರಾತ್ ಚುನಾವಣೆ ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ನಡೆಯಲಿದೆ.

ರಾಜ್ಯಕ್ಕೆ ಸಂಬಂಧಿಸಿದ ಯಾವ ವಿಷಯದಲ್ಲಿಯೂ ಬಿಜೆಪಿ ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದ ಹಾರ್ಧಿಕ್, ತಾನು ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿ ಮಾಡಿದ ಆರೋಪವನ್ನು ಅಲ್ಲಗೆಳೆದಿದ್ದಾರೆ. ತಾನು ನಿತೀಶ್, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಮುಂತಾದ ನಾಯಕರನ್ನು ಭೇಟಿ ಮಾಡಿದ್ದೇನ, ಶೀಘ್ರದಲ್ಲಿಯೇ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡುತ್ತೇನೆ ಎಂದರು.

ಅಹಮದಾಬಾದ್ ಹೋಟೆಲಿನಲ್ಲಿ ತಾನು ರಾಹುಲ್ ಗಾಂಧಿಯೊಂದಿಗೆ ಭೇಟಿಯಾದ ದೃಶ್ಯಗಳ ಸಿಸಿಟಿವಿ ಫೂಟೇಜ್ ಅನ್ನು ಬಿಜೆಪಿ ಬಿಡುಗಡೆ ಮಾಡಿದ್ದರ ಕುರಿತು ಹಾರ್ಧಿಕ್ ಆಶ್ಚರ್ಯ ವ್ಯಕ್ತಪಡಿಸಿದರು. ಬಿಜೆಪಿ ಗೂಡಚಾರಿಕೆ ನಡೆಸುತ್ತಿದೆ. ಇದು ತನ್ನ ಗೌಪ್ಯತೆಗೆ ಧಕ್ಕೆ ತರುವಂತದ್ದು ಎಂದು ಹೇಳಿದರು.