ರಾಬಿನ್ ಸನ್ ಕ್ರೂಸೋ ಭಾಗ-1 – News Mirchi

ರಾಬಿನ್ ಸನ್ ಕ್ರೂಸೋ ಭಾಗ-1

ಉತ್ತರ ಇಂಗ್ಲೆಂಡ್ ನಲ್ಲಿ ಯಾರ್ಕ್ ಎಂಬ ಸಣ್ಣ ಪಟ್ಟಣವೊಂದಿದೆ. ಆ ಪಟ್ಟಣದಲ್ಲಿ ವ್ಯಾಪಾರಿಯೊಬ್ಬನಿದ್ದ. ತುಂಬಾ ಶ್ರೀಮಂತ. ಆತನಿಗಿದ್ದ ಮೂವರು ಮಕ್ಕಳಲ್ಲಿ ಮೂರನೆಯವನೇ ನಮ್ಮ ಕಥಾನಾಯಕ ರಾಬಿನ್ ಸನ್ ಕ್ರೂಸೋ. 1632 ರಲ್ಲಿ ಹುಟ್ಟಿದ ರಾಬಿನ್ ಸನ್ ಕ್ರೂಸೋ ಜನ್ಮತಃ ದೈರ್ಯವಂತ. ಸಣ್ಣವನಿಂದಲೇ ವೀರರ ಕಥೆಗಳನ್ನು ಹೆಚ್ಚು ಓದುತ್ತಿದ್ದ. ಹೀಗಾಗಿ ಬೆಳೆದು ದೊಡ್ಡವನಾಗುತ್ತಾ ಸಾಹಸಮಯ ಜೀವನ ನಡೆಸಬೇಕೆಂದು ಸದಾ ಬಯಸುತ್ತಿದ್ದ.

ತಂದೆಗೆ ತನ್ನ ಮೂರನೇ ಮಗ ರಾಬಿನ್ ಸನ್ ಕ್ರೂಸೋ ಚೆನ್ನಾಗಿ ಓದಿ ವಕೀಲನಾಗಬೇಕೆಂಬ ಬಯಕೆ. ಆದರೆ ಆ ವೃತ್ತಿಯೆಂದರೆ ರಾಬಿನ್ ಗೆ ಇಷ್ಟವಿರಲಿಲ್ಲ. ನಾವಿಕನಾದವನು ಸಮುದ್ರಯಾನ ಮಾಡಬೇಕು, ಹಲವು ದೇಶಗಳನ್ನು ಸುತ್ತಾಡಿ ಬರಬೇಕು ಎಂದು ಬಯಸುತ್ತಿದ್ದ. ಆತನ ಹಿತ ಕೋರಿ ನಾವಿಕನಾಗಿ ಹೋಗಬೇಡ ಎಂದು ಆತನ ಪೋಷಕರು, ಬಂಧುಮಿತ್ರರು ಎಷ್ಟು ಬುದ್ದಿ ಹೇಳಿದರೂ ಅವನ ತನ್ನ ಮನಸ್ಸು ಬದಲಿಸಲಾಗಲಿಲ್ಲ. ಆದರೆ ಆತನ ತಂದೆ ಗಟ್ಟಿಯಾಗಿ ಬುದ್ದಿ ಹೇಳಿದ್ದರಿಂದಾಗಿ ಬಲವಂತವಾಗಿ ತಮ್ಮ ಮನದಾಸೆಯನ್ನು ಅದುಮಿಟ್ಟುಕೊಂಡ.

ರಾಬಿನ್ ಸನ್ ತಂದೆಯ ಸ್ನೇಹಿತರಲ್ಲಿ ಹಡಗಿನ ಕ್ಯಾಪ್ಟನ್ ಕೂಡಾ ಒಬ್ಬ. ಒಮ್ಮೆ ಆ ಕ್ಯಾಪ್ಟನ್ ತನ್ನ ಮಗನೊಂದಿಗೆ ರಾಬಿನ್ ಸನ್ ಕ್ರೂಸೋ ಮನೆಗೆ ಆಗಮಿಸಿದ. ಆತನ ಮಗನ ವಯಸ್ಸೂ ರಾಬಿನ್ ಸನ್ ಕ್ರೂಸೋ ವಯಸ್ಸು ಹೆಚ್ಚು ಕಡಿಮೆ ಒಂದೇ. ಹೀಗಾಗಿ ಇಬ್ಬರಲ್ಲೂ ಬಹು ಬೇಗ ಸ್ನೇಹ ಚಿಗುರಿತು. ಆ ಹೊಸ ಸ್ನೇಹಿತ ತನ್ನ ತಂದೆಯೊಂದಿಗೆ ಸದಾ ಹಡಗಿನಲ್ಲಿ ಸಮುದ್ರಯಾನ ಮಾಡುತ್ತಾ ಅನೇಕ ದೇಶಗಳನ್ನು ಸುತ್ತಿ ಬಂದಿದ್ದ. ತಾನು ನೋಡಿದ್ದ ವಿವಿಧ ದೇಶಗಳ ವಿಚಿತ್ರ ಸಂಗತಿಗಳನ್ನು ರಾಬಿನ್ ಸನ್ ಕ್ರೂಸೋ ಜೊತೆ ವಿವರವಾಗಿ ಹೇಳಿದ. ಮೊದಲೇ ಸಮುದ್ರಯಾನದ ಬಯಕೆಯನ್ನು ಅನ್ಯಮಾರ್ಗವಿಲ್ಲದೆ ಅದುಮಿಟ್ಟುಕೊಂಡಿದ್ದ ರಾಬಿನ್ ಸನ್ ಗೆ ಈ ಸ್ನೇಹಿತನ ಮಾತುಗಳಿಂದ ಮತ್ತೆ ನೌಕಾಯಾನ ಮೇಲೆ ಕಡೆ ಮನಸ್ಸು ಹೊರಳಿತು. ಮತ್ತೆ ಹಳೆ ಬಯಕೆ ಎದ್ದು ನಿಂತಿತ್ತು.

ಗೆಳೆಯಾ… ನಾನೂ ಸಮುದ್ರಯಾನ ಮಾಡಬೇಕು, ವಿವಿಧ ದೇಶಗಳಿಗೆ ಸಂಚರಿಸಿ ಅಲ್ಲಿನ ವಿಶೇಷಗಳನ್ನು ನೋಡಿ ಬರಬೇಕು ಎಂಬ ಆಸೆಯಾಗಿದೆ. ನಾವಿಕನ ಜೀವನವೇ ನನಗಿಷ್ಟ ಎಂದು ತನ್ನ ಮನದಾಳದ ಮಾತನ್ನು ಗೆಳೆಯನಿಗೆ ಕ್ರೂಸೋ ಹೇಳುತ್ತಾನೆ.

ಅಯ್ಯೋ ಅದಕ್ಕೇಕೆ ಚಿಂತೆ? ಬರುವ ಶನಿವಾರ ನಾವು ಹಲ್ ಡಾಕ್ ನಿಂದ ಹಡಗಿನಲ್ಲಿ ಲಂಡನ್ ಗೆ ಹೋಗುತ್ತಿದ್ದೇವೆ. ನಿನಗೆ ಆಸೆಯಿದ್ದರೆ ನಮ್ಮೊಂದಿಗೆ ಬಾ, ನಿನಗೆ ಯಾವುದೇ ಖರ್ಚಿಲ್ಲದೆ ನಾನು ಕರೆದೆಯ್ಯುತ್ತೇನೆ ಎಂದು ಅಭಯವಿತ್ತ ಗೆಳೆಯ.

ನನಗೂ ಬರಬೇಕು ಅಂತಲೇ ಇದೆ. ಆದರೆ ನನ್ನ ತಂದೆಗೆ ಇದು ಇಷ್ಟವಿಲ್ಲ…

ಯಾಕೆ..?

ನಾವಿಕನಾದವನು ತನ್ನ ಜೀವವನ್ನು ಸದಾ ಅಂಗೈಯಲ್ಲಿ ಇಟ್ಟುಕೊಂಡು ಜೀವಿಸಬೇಕಾಗುತ್ತದೆ ಎಂದು ನನ್ನ ತಂದೆಯ ಭಯ.

ಸಮುದ್ರಯಾನದಲ್ಲಿ ಅವಘಡಗಳು ಇದ್ದೇ ಇರುತ್ತವೆ. ಆಗಾಗ ನಾವು ಚಂಡಮಾರುತಗಳನ್ನು ಎದುರಿಸಬೇಕಾಗಿರುತ್ತದೆ. ಆದರೆ ಅದು ಬರುವುದು ತುಂಬಾ ಅಪರೂಪ. ಪ್ರತಿ ವೃತ್ತಿಯಲ್ಲಿಯೂ ಒಳ್ಳೆಯದು, ಕೆಟ್ಟದ್ದು ಎಂಬುದು ಇದ್ದೇ ಇರುತ್ತದೆ. ಸಮುದ್ರಯಾನ ಮಾಡುವ ನಾವಿಕರಿಗೆ ಚಂಡಮಾರುತ ಎದುರಿಸುವ ಧೈರ್ಯ, ಶಕ್ತಿಗಳಿರಬೇಕು. ಆಗಲೇ ಅವರು ಬದುಕು ಸಂತೋಷದಾಯಕವಾಗಿರುತ್ತದೆ. ವಿವಿಧ ದೇಶಗಳನ್ನು, ವಿವಿಧ ರೀತಿಯ ಮನುಷ್ಯರನ್ನು, ಅನೇಕ ವಿಚಿತ್ರಗಳನ್ನು ನೋಡುವ ಅದೃಷ್ಟ ಒಬ್ಬ ನಾವಿಕನಿಗೆ ಮಾತ್ರ ಲಭಿಸುತ್ತಿರುತ್ತದೆ. ಎಲ್ಲರಿಗೂ ಈ ಅದೃಷ್ಟವಿಲ್ಲ. ನಿಮ್ಮ ತಂದೆಯವರು ಬಯಸಿದಂತೆ ನೀನು ಒಬ್ಬ ವಕೀಲನಾದರೆ ಈ ಊರಿನಲ್ಲಿಯೇ ಇದ್ದು ಜೀವನ ಪೂರ್ತಿ ಒಂದೇ ರೀತಿಯ ಬದುಕಬೇಕಿರುತ್ತದೆ.

ನನಗೆ ಸಣ್ಣವನಿಂದ ನಾವಿಕನ ಜೀವನದ ಕಡೆ ಆಕರ್ಷಣೆ. ಚಂಡಮಾರುತವೆಂದರೆ ಭಯವಿಲ್ಲ, ದೊಡ್ಡದಾಗಿ ಗಾಳಿ ಬೀಸುತ್ತಾ, ಬೃಹತ್ ಅಲೆಗಳೆ ಎದ್ದೆದ್ದು ಬೀಳುತ್ತಿದ್ದಾಗ ಸಮುದ್ರದಲ್ಲಿ ಹಡಗು ಉಯ್ಯಾಲೆಯಂತೆ ತೂಗಾಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಲ್ವಾ? ಎಂದು ಕ್ರೂಸೋ ಸಮುದ್ರಯಾನದ ಕುರಿತು ಕಲ್ಪನೆ ಮಾಡಿಕೊಳ್ಳುತ್ತಾ ಗೆಳೆಯನನ್ನು ಪ್ರಶ್ನಿಸಿದ.

ಇಲ್ಲ ಅಂತಹ ಪರಿಸ್ಥಿತಿಯ ಹಡಗು ಪ್ರಯಾಣ ಸಂತೋಷವಾಗಿರುವುದಿಲ್ಲ, ತುಂಬಾ ಭಯಂಕರವಾಗಿರುತ್ತದೆ. ಆದರೆ ಅದರಿಂದ ನಿಮ್ಮ ಧೈರ್ಯ, ಸಾಹಸಗಳು ಹೆಚ್ಚುತ್ತವೆ ಎಂದ ಗೆಳೆಯ.

“ನನ್ನನ್ನು ಸಮುದ್ರಯಾನಕ್ಕೆ ಕಳುಹಿಸುವಂತೆ ನನ್ನ ತಂದೆಯ್ನು ಕೊನೆಯ ಬಾರಿಗೆ ಕೇಳುತ್ತೇನೆ. ಅವರು ಅನುಮತಿ ನೀಡಿದರೆ ಸರಿ, ಇಲ್ಲದಿದ್ದರೆ ಯಾರಿಗೂ ಹೇಳದೆ ಕೇಳದೆ ಬಂದು ನಿಮ್ಮನ್ನು ಹಲ್ ಡಾಕ್ ಬಳಿ ಮುಂದಿನ ಶನಿವಾರ ಭೇಟಿಯಾಗ್ತೀನಿ” ಎಂದು ಕ್ರೂಸೋ ತನ್ನ ದೃಢ ನಿರ್ಧಾರವನ್ನು ಸ್ನೇಹಿತನಿಗೆ ಹೇಳಿದ.

“ಖಂಡಿತ ಬಾ” ಎಂದು ಗೆಳೆಯ ಹೇಳಿದ..

ಅತಿಥಿಯಾಗಿ ಬಂದಿದ್ದ ಹಡಗಿನ ಕ್ಯಾಪ್ಟನ್ ಮತ್ತು ಆತನ ಮಗ ಹೋದ ನಂತರ ಕ್ರೂಸೋ ತನ್ನ ತಂದೆಯ ಬಳಿಗೆ ಹೋಗಿ ಸಮುದ್ರಯಾನಕ್ಕೆ ಕಳುಹಿಸಿಕೊಡುವಂತೆ ಕೇಳಿಕೊಂಡ….

“ನೀನು ವಕೀಲನಾದರೆ ನೀನು ಸಂತೋಷವಾಗಿ ಜೀವನನ್ನು ಸಾಗಿಸಬಹುದು. ನಿನಗೆ ಒಳ್ಳೆಯ ಹೆಸರು, ಪ್ರತಿಷ್ಠೆ ಬರುತ್ತೆ. ನೀನು ನನ್ನ ಮಾತು ಕೇಳಿ ಮನೆ ಕಡೆಯೇ ಇದ್ದರೆ ನಿನಗೆ ಬೇಕಿದ್ದು ಕೊಡಿಸುತ್ತೇನೆ. ಸಮುದ್ರಯಾನವೆಂದರೆ ನೀನು ಏನೋ ಕಲ್ಪನೆ ಮಾಡಿಕೊಂಡಿದ್ದೀಯಾ. ಅದರಲ್ಲಿರುವ ಅಪಾಯಗಳು ನಿನಗೆ ಗೊತ್ತಿಲ್ಲ. ನನ್ನ ಮಾತು ಕೇಳಿ ಸಮುದ್ರಯಾನದ ಜೀವನದ ಕುರಿತು ಮರೆತುಬಿಡು. ಹಿರಿಯರ ಮಾತು ಕೇಳು, ನಿನಗೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಆ ತಪ್ಪಿಗೆ ತಕ್ಕ ಶಿಕ್ಷ ನೀನು ಅನುಭವಿಸ್ತೀಯ” ಎಂದು ತಂದೆ ಅವನಿಗೆ ಬುದ್ದಿ ಹೇಳಿದರು.

ಆದರೆ ಕ್ರೂಸೋ ಮಾತ್ರ ತನ್ನ ನಿರ್ಧಾರ ಬದಲಿಸಲಿಲ್ಲ. ಮೊದಲೇ ನಿರ್ಧರಿಸಿದಂತೆ ಯಾರಿಗೂ ಹೇಳದೆ ಮನೆ ಬಿಟ್ಟು ಹೊರಟ. ಶನಿವಾರದ ವೇಳೆಗೆ ಆತ ಹಲ್ ಡಾಕ್ ಬಳಿ ತಲುಪಿ ತನ್ನ ಸ್ನೇಹಿತನನ್ನು ಕೂಡಿಕೊಂಡ. ಮನೆಯಿಂದ ಪರಾರಿಯಾಗಿ ಬಂದ ಸಂದರ್ಭದಲ್ಲಿ ರಾಬಿನ್ ಸನ್ ಕ್ರೂಸೋ ಇನ್ನೂ ಸಣ್ಣವನೇನಲ್ಲ. ಅಂದಿಗೆ ಅವನಿಗೆ 20 ವರ್ಷಗಳು.

ಮುಂದುವರೆಯುತ್ತದೆ…

ರೆಡ್ಡಿಬ್ಯಾಂಗ್ ಮಂಜುನಾಥ ರೆಡ್ಡಿ
(ಅನುವಾದ)

Loading...