ಗರ್ಭಿಣಿ ಮಹಿಳೆಯರಿಗೆ ಆಕರ್ಷಕ ಯೋಜನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಿರೀಕ್ಷೆಯಂತೆ ಕೆಲ ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ಬಡವರು, ಸಣ್ಣ ವ್ಯಾಪಾರಿಗಳು, ರೈತರು, ಮಹಿಳೆಯರು, ಹಿರಿಯ ನಾಗರೀಕರಿಗಾಗಿ ಆಕರ್ಷಕ ಯೋಜನೆಗಳನ್ನು ಘೋಷಿಸಿದ್ದಾರೆ.

ದೇಶದಲ್ಲಿನ ಮಹಿಳೆಯರು, ಉದ್ಯೋಗಿಗಳು, ಬಡವರು ಉದ್ಧಾರ ಆದಾಗಲೇ ದೇಶಕ್ಕೆ ಒಳಿತಾಗುತ್ತದೆ ಎಂದ ಮೋದಿ, ಗರ್ಭಿಣಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಗರ್ಭಿಣಿಯರ ಚಿಕಿತ್ಸೆ, ಹೆರಿಗೆ, ಪೌಷ್ಟಿಕ ಆಹಾರ ಮುಂತಾದ ವೈದ್ಯಕೀಯ ವೆಚ್ಚಗಳಿಗಾಗಿ ರೂ. 6 ಸಾವಿರ ರೂ ನೀಡುವುದಾಗಿ ಹೇಳಿದ್ದಾರೆ. ನೇರವಾಗಿ ಆಯಾ ಗರ್ಭಿಣಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಹಣ ಜಮೆಯಾಗಲಿದೆ ಎಂದರು.

ತಾಯಿ, ಮಕ್ಕಳ ಮರಣ ನಿಯಂತ್ರಣಕ್ಕೆ ಈ ಯೋಜನೆ ಉಪಯೋಗವಾಗಲಿದೆ ಎಂದ ಮೋದಿ, ಪ್ರಾಯೋಗಿಕವಾಗಿ ಈ ಯೋಜನೆಯನ್ನು 650 ಜಿಲ್ಲೆಗಳಲ್ಲಿ ಆರಂಭಿಸುತ್ತೇವೆ ಎಂದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.33 ಗೃಹ ನಿರ್ಮಾಣಗಳನ್ನು ಹೆಚ್ಚಿಸುವುದಾಗಿ ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅಥವಾ ಇರುವ ಮನೆಯನ್ನು ದುರಸ್ಥಿ ಮಾಡಿಕೊಳ್ಳುವವರಿಗೆ ಸಾಲ ಸೌಲಭ್ಯ ನೀಡಲಿದ್ದು, ರೂ.9 ಲಕ್ಷದವರೆಗಿನ ಸಾಲದ ಮೇಲೆ ಶೇ.4 ರಷ್ಟು ಬಡ್ಡಿ ಕಡಿತ, ರೂ. 12 ಲಕ್ಷದವರೆಗಿನ ಸಾಲಗಳಿಗೆ ಶೇ. 3 ರಷ್ಟು ಬಡ್ಡಿ ಕಡಿತ ಮಾಡುವುದಾಗಿ ಹೇಳಿದರು.