ಎಲ್ಲೇ ಆದರೂ, ಯಾವುದೇ ಸಂದರ್ಭದಲ್ಲಿ ಸೇವೆಗೆ ಆರ್.ಎಸ್.ಎಸ್ ಸಿದ್ಧ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಕುರಿತು ತಾನು ನೀಡಿದ್ದ ಹೇಳಿಕೆಗೆ ಬದ್ದನಾಗಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆರ್.ಎಸ್.ಎಸ್ ನ ವಿಭಜನೆ, ದ್ವೇಷ ಹುಟ್ಟುಹಾಕುವ ಅಜೆಂಡಾ ವಿರುದ್ಧ ತಮ್ಮ ಹೋರಾಟವನ್ನು ಎಂದಿಗೂ ನಿಲ್ಲುಸುವುದಿಲ್ಲ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯನ್ನು ಆರ್.ಎಸ್.ಎಸ್ ಹತ್ಯೆ ಮಾಡಿರುವುದಾಗಿ ತಾವು ಹೇಳಿಲ್ಲ, ಆರ್.ಎಸ್.ಎಸ್ ಜೊತೆ ಸಂಬಂಧವಿರುವ ವ್ಯಕ್ತಿ ಗಾಂಧಿ ಹತ್ಯೆಗೆ ಹೊಣೆ ಎಂದು ಮಾತ್ರ ತಾವು ಹೇಳಿದ್ದಾಗಿ ಅವರು ಸುಪ್ರೀಂ ಕೋರ್ಟ್ ಗೆ ಹೇಳಿದ್ದರು. ತಾವು ಮಾತು ಬದಲಿಸುತ್ತಿರುವುದಾಗಿ ಬರುತ್ತಿರುವ ಟೀಕೆಗಳಿಗೆ ರಾಹುಲ್ ಸ್ಪಂದಿಸಿದ್ದು ಹೀಗೆ.

ಇದಕ್ಕೂ ಮುನ್ನ ಕೇಂದ್ರ ಸಚಿವ ವೆಂಕಯ್ಯನಾಯ್ಡು ಟ್ವೀಟ್ ಮಾಡಿ… ಮಹಾತ್ಮಾ ಗಾಂಧಿ ಹತ್ಯೆಯೊಂದಿಗೆ ಆರ್.ಎಸ್.ಎಸ್. ಗೆ ಸಂಬಂಧವಿಲ್ಲ ಎಂಬ ವಿಷಯವನ್ನು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಒಪ್ಪಿಕೊಂಡಿರುವುದು ಒಳ್ಳೆಯದೇ ಎಂದರು. ಇದೊಂದು ಯೂ ಟರ್ನ್. ಸತ್ಯವೇ ಅಂತಿಮವಾಗಿ ಗೆಲುವು ಕಂಡಿದೆ. ಆರ್.ಎಸ್.ಎಸ್ ಎನ್ನುವುದು ದೇಶ ಭಕ್ತಿ ಇರುವ ಸಂಘಟನೆ. ಇಂತಹ ಸಂಘಟನೆ ಕುರಿತು ತಪ್ಪಾಗಿ ಮಾತನಾಡುವುದು ಯಾರಿಗೂ ಶೋಭೆಯಲ್ಲ. ಯಾವ ಸಮಯದಲ್ಲಾದರೂ, ಎಲ್ಲಿಯಾದರೂ ಸರಿ ಆರ್.ಎಸ್.ಎಸ್ ಸದಾ ಸೇವೆಗೆ ಸಿದ್ಧ ಎಂದು ವೆಂಕಯ್ಯ ಹೇಳಿದರು.

ಆರ್.ಎಸ್.ಎಸ್ ವಿರುದ್ಧ ನೀಡಿರುವ ಹೇಳಿಕೆಯಿಂದ ರಾಹುಲ್ ಹಿಂದೆ ಸರಿದಂತೆ ಅಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಹಂತಕ ಆರ್.ಎಸ್.ಎಸ್ ನವರೇ ಎಂದು ಹೇಳಿದ್ದಾರೆ. ದ್ವೇಷ, ಹಿಂಸೆಯ ಸಿದ್ಧಾಂತವೇ ಮಾಹಾತ್ಮನನ್ನು ಹತ್ಯೆ ಮಾಡಿತು ಎಂದು ಡಿಗ್ಗಿ ಟ್ವೀಟ್ ಮಾಡಿದ್ದಾರೆ.

ಇನ್ನು ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಇರುವ ಕೊಲೆ ಆರೋಪಗಳು, ಅತ್ಯಾಚಾರ ಆರೋಪಗಳನ್ನು ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಲೆಗೆ ಕಟ್ಟಬಹುದಾ ಎಂದು ಬಿಜೆಪಿ ಪ್ರಶ್ನಿಸಿದೆ. ಮಹಾತ್ಮಾಗಾಂಧಿ ಹತ್ಯೆಗೂ ಆರ್.ಎಸ್.ಎಸ್ ಗೂ ಸಂಬಂಧ ಕಲ್ಪಿಸಿ ರಾಹುಲ್ ನೀಡಿದ್ದ ಹೇಳಿಕೆ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ದರ್ಶಿ ಶ್ರೀಶಾಂತ್ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಮೇಲಿನಂತೆ ಪ್ರಶ್ನಿಸಿದ್ದಾರೆ.