ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿ

ಭಾರತದ ಮೊದಲ ಮಹಿಳಾ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ರುಕ್ಮಾಬಾಯಿ ರಾವತ್ ಅವರ 153 ನೇ ಜನ್ಮ ದಿನಾಚರಣೆಗೆ ಗೂಗಲ್ ವಿಶೇಷವಾಗಿ ಸ್ಮರಿಸಿಕೊಂಡಿದೆ. ರುಕ್ಮಾಬಾಯಿ ರಾವತ್ ಅವರ ಡೂಡಲ್ ಬಿಡುಗಡೆ ಮಾಡಿ ವಿಶೇಷ ಗೌರವ ಸಲ್ಲಿಸಿದೆ.

1864 ರ ನವೆಂಬರ್ 22 ರಂದು ಮುಂಬೈನಲ್ಲಿ ಜನಿಸಿದ ರಾವತ್ ಅವರಿಗೆ ತಮ್ಮ 11 ನೇ ವಯಸ್ಸಿನಲ್ಲಿ ಮದುವೆಯಾಯಿತು. ಆದರೆ ಮದುವೆಯ ನಂತರ ಅವರು ಪತಿಯ ಜೊತೆ ಜೀವಿಸಲಿಲ್ಲ. ಬದಲಾಗಿ ಪೋಷಕರೊಂದಿಗೆ ವಾಸವಿದ್ದ ರುಕ್ಮಾಬಾಯಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.

ಆದರೆ ಅವರ ಪತಿ ತನ್ನ ಪತ್ನಿಯ ಮೇಲಿನ ಹಕ್ಕು ಸ್ಥಾಪಿಸಲು, ತನ್ನೊಂದಿಗೆ ತನ್ನ ಪತ್ನಿಯನ್ನು ಸಂಸಾರ ಮಾಡಲು ಕಳುಹಿಸಬೇಕೆಂದು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತಿಯೊಂದಿಗೆ ಜೀವಿಸಬೇಕು ಇಲ್ಲವೇ ಜೈಲಿಗೆ ಹೋಗಬೇಕು ಎಂದು ಕೋರ್ಟ್ ಆಕೆಗೆ ಎರಡು ಆಯ್ಕೆ ನೀಡಿತ್ತು. ಪತಿಯೊಂದಿಗೆ ಜೀವಿಸಲು ನಿರಾಕರಿಸಿದ್ದ ರುಕ್ಮಾಬಾಯಿ ಜೈಲಿಗೆ ಹೋಗುವುದಕ್ಕೂ ಸಿದ್ಧಳಾಗಿದ್ದಳು.

ಮದುವೆಯಾದ ಸಂದರ್ಭದಲ್ಲಿ ಸಣ್ಣ ವಯಸ್ಸಿನವಳಾಗಿದ್ದ ಕಾರಣ ತನ್ನ ಮದುವೆಗೆ ತನ್ನ ಒಪ್ಪಿಗೆಯನ್ನು ಸೂಚಿಸಲು ಸಮರ್ಥಳಿರಲಿಲ್ಲ ಎಂದು ಆಕೆ ವಾದಿಸಿದ್ದರು. ಇದೇ ಮೊದಲ ಬಾರಿಗೆ ಒಪ್ಪಿಗೆಯ ಕಲ್ಪನೆಯನ್ನು ನ್ಯಾಯಾಲಯದ ಮುಂದೆ ಇಡಲಾಯಿತು. ಇದೇ ಮುಂದೆ ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ 1891 ರ ಜಾರಿಗೆ ದಾರಿಯಾಯಿತು.

ಕೇಸು ಗೆದ್ದ ರಾವತ್, ನಂತರದ ದಿನಗಳಲ್ಲಿ ವೈದ್ಯಕೀಯ ತರಬೇತಿ ಪಡೆದು ಯಶಸ್ವಿಯಾಗಿ 35 ವರ್ಷಗಳ ಕಾಲ ವೈದ್ಯವೃತ್ತಿಯಲ್ಲಿ ಮುಂದುವರೆದರು. ಬಾಲ್ಯವಿವಾಹಗಳ ವಿರುದ್ಧ ಹೋರಾಡಿದ ರುಕ್ಮಾಬಾಯಿ ರಾವತ್, ತಮ್ಮ ಉಸಿರಿರುವವರೆಗೂ ಸಾಮಾಜಿಕ ಸುಧಾರಣಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ತಮ್ಮ 91 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 25, 1991 ರಂದು ಅವರು ಕೊನೆಯುಸಿರೆಳೆದರು.

ಭಾರತದ ಮೊದಲ ಮಹಿಳಾ ವೈದ್ಯೆ ಎಂದಾಗ ಕೆಲವು ಆನಂದ ಜೋಶಿಯವರ ಹೆಸರು ಹೇಳುತ್ತಾರಾದರೂ, ಆನಂದ ಜೋಶಿ ವೈದ್ಯರಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆಯೇ ಹೊರತು, ಅವರು ಎಂದೂ ವೈದ್ಯರಾಗಿ ಪ್ರಾಕ್ಟೀಸ್ ಮಾಡಲಿಲ್ಲ. ರುಕ್ಮಾಬಾಯಿಯವರು 1894 ರಲ್ಲಿ ವೈದ್ಯರಾಗಿ ಅರ್ಹತೆ ಪಡೆದರು.

Get Latest updates on WhatsApp. Send ‘Add Me’ to 8550851559