ಸಹರಾನ್ಪುರ: ಮತ್ತೆ ಶುರುವಾದ ಘರ್ಷಣೆಯಲ್ಲಿ ಒಬ್ಬನ ಸಾವು

ಎರಡು ವರ್ಗಗಳ ನಡುವಿನ ಘರ್ಷಣೆಯಿಂದ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ಬುಧವಾರ ಅಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ವರ್ಗಗಳ ನಡುವೆ ಶುರುವಾದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ನಡೆಸಿದ ರ್ಯಾಲಿಗೆ ಮುನ್ನಾ ಷಬೀರ್ಪುರದ ರಜಪೂತರ ನಿವಾಸಗಳ ಮೇಲೆ ದಲಿತ ವರ್ಗದ ಕೆಲವರು ಕಲ್ಲೆಸೆದಿದ್ದರಿಂದ ಎರಡು ವರ್ಗಗಳ ನಡುವೆ ಉದ್ರಿಕ್ತ ಪರಿಸ್ಥಿತಿ ನೆಲೆಸಿತ್ತು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಆದರೆ ರ್ಯಾಲಿ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಟ್ರಕ್ ನಲ್ಲಿ ದಲಿತರು ವಾಪಸಾಗುತ್ತಿದ್ದಾಗ ಆ ಪ್ರದೇಶದಲ್ಲಿ ಠಾಕೂರರು ದಾಳಿಗೆ ಮುಂದಾದರು. ಹೀಗಾಗಿ ಎರಡೂ ವರ್ಗಗಳ ನಡುವೆ ಘರ್ಷಣೆ ಆರಂಭವಾಯಿತು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದಾಗಿ ಐದು ಕಂಪನಿಗಳ ಹೆಚ್ಚುವರಿ ಪೊಲೀಸ್ ಪಡೆಗಳು ಅಲ್ಲಿ ನಿಯೋಜನೆಗೊಂಡಿವೆ.

ಶಬ್ಬೀರ್ಪುರ ಗ್ರಾಮದಲ್ಲಿ ಈ ತಿಂಗಳ ಆರಂಭದಲ್ಲೇ ಮಾಯಾವತಿ ಪ್ರವಾಸದ ಸಂದರ್ಭದಲ್ಲಿ ದಲಿತರು, ಠಾಕೂರರ ನಡುವೆ ಘರ್ಷಣೆ ಆರಂಭವಾಗಿತ್ತು. ಇದೀಗ ಮತ್ತೆ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು ಮಾಯಾವತಿ ಪ್ರವಾಸದ ಕುರಿತು ಉತ್ತರ ಪ್ರದೇಶ ಸರ್ಕಾರ ಟೀಕಾ ಪ್ರಹಾರ ಮಾಡಿದೆ. ಮಾಯಾವತಿ ಪ್ರವಾಸದಿಂದ ಸಹರಾನ್ಪುರದಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸಿದ್ದರೂ, ಹಾಗಾಗದೆ ಹಿಂಸೆ ನಡೆದಿದೆ ಎಂದು ಆರೋಪಿಸಿದೆ. ಈ ಹಿಂಸಾಚಾರದಲ್ಲಿ ಬೇರೆ ಏನಾದರೂ ಸಂಬಂಧಗಳಿವೆಯಾ ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ಮೀರತ್ ಜೋನ್ ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ಹೇಳಿದ್ದಾರೆ. ಕಳೆದ ಮೂರು ವಾರಗಳಿಂದ ಸಹರಾನ್ಪುರದಲ್ಲಿ ಎರಡು ಜಾತಿಗಳ ನಡುವೆ ಹಿಂಸಾಚಾರ ನಡೆದಿರುವುದು ಇದು ನಾಲ್ಕನೇ ಬಾರಿ. ಈ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 30 ಜನರನ್ನು ಬಂಧಿಸಿದ್ದು, ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.