ಮೋದಿ ನಡೆಗೆ ನನ್ನ ಸೆಲ್ಯೂಟ್ : ಮೋಹನ್ ಲಾಲ್

ತಿರುವನಂತಪುರಂ: ಕಪ್ಪು ಹಣ ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿ ತೆಗೆದುಕೊಂಡ ತೀರ್ಮಾನಕ್ಕೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟು ರದ್ದು ತೀರ್ಮಾನವನ್ನು ನಾನು ಸರ್ಜಿಕಲ್ ದಾಳಿಯಂತೆಯೇ ಭಾವಿಸುತ್ತಿದ್ದೇನೆ. ನಾನು ನಾಯಕರನ್ನು ಪೂಜಿಸುವುದಿಲ್ಲ, ಆದರೆ ಆ ನಾಯಕರು ತೆಗೆದುಕೊಳ್ಳುವ ತೀರ್ಮಾನಗಳನ್ನು ಗೌರವಿಸುತ್ತೇನೆ. ಈಗ ಮೋದಿ ತೆಗೆದುಕೊಂಡ ತೀರ್ಮಾನ ಸಹ ಅಂತದ್ದೇ. ದೊಡ್ಡ ನೋಟು ರದ್ದು ಮಾಡಿದ್ದರಿಂದ ತಾತ್ಕಾಲಿಕವಾಗಿ ಸಮಸ್ಯೆಗಳು ಎದುರಾದರೂ, ಮುಂದೆ ಒಳ್ಳೆಯದೇ ಆಗುತ್ತದೆ ಎಂದು ನನಗೆ ಅರ್ಥವಾಗಿದೆ.

ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದರ ಪ್ರಭಾವ ಕಾಣಿಸದೇ ಹೋಗುವುದಿಲ್ಲ. ಹಣಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಬ್ಯಾಂಕುಗಳ ಎದುರು ಕಾಯುತ್ತಿರುವ ಜನರ ಕಷ್ಟಗಳು ನನಗೆ ಅರ್ಥವಾಗುತ್ತವೆ. ಆದರೆ ಮದ್ಯದಂಗಡಿ, ಚಿತ್ರಮಂದಿರಗಳು, ದೇವಸ್ಥಾನಗಳ ಎದುರು ಕೂಡಾ ಗಂಟೆಗಟ್ಟಲೆ ನಿಲ್ಲುತ್ತೇವೆ. ಹಾಗೆಯೇ ಭವಿಷ್ಯದಲ್ಲಿ ಒಳ್ಳೆಯದು ಆಗುವಾಗ ಕೆಲ ಗಂಟೆಗಳ ಕಾಲ ನಿಂತರೂ ನಷ್ಟವೇನಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಮೋಹನ್ ಲಾಲ್ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.