ಸ್ಯಾಮ್ಸಂಗ್ ಒಡೆಯನಿಗೆ 5 ವರ್ಷ ಜೈಲು

ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ದಕ್ಷಿಣ ಕೊರಿಯಾದ ಪ್ರಸಿದ್ಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಸ್ಯಾಮ್ಸಂಗ್ ನ ವೈಸ್ ಚೇರ್ಮನ್ ಲೀ ಜೇ-ಯಾಂಗ್ ಅಪರಾಧಿ ಎಂದು ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ. ಶುಕ್ರವಾರ ಲೀ ಕೇಸು ಅಂತಿಮ ವಿಚಾರಣೆ ನಡೆಸಿದ ದಕ್ಷಿಣ ಕೊರಿಯಾ ಕೋರ್ಟ್, ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆ ಪಾರ್ಕ್ ಗ್ವೆನ್ ಹೈ ಗೆ ಸಂಬಂಧಿಸಿದ ಕಂಪನಿಗಳಿಗೆ ಅವರು ಸುಮಾರು 36 ಮಿಲಿಯನ್ ಡಾಲರ್ ವರ್ಗಾವಣೆ ಮಾಡಿದ್ದಾಗಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿ ಅವರು ಭಾರೀ ಮೊತ್ತದ ಲಂಚ ನೀಡಿದ್ದಾಗಿ ಆರೋಪಗಳು ದಾಖಲಾಗಿದ್ದವು.

ಅತ್ಯಂತ ಶ್ರೀಮಂತರಾಗಿ ಹೆಸರುವಾಸಿಯಾಗಿರುವ ಲೀ ವಿರುದ್ಧ, ಭ್ರಷ್ಟಾಚಾರ, ಲಂಚ ಪಡೆದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಫೆಬ್ರವರಿಯಲ್ಲಿ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದರು. ಲೀಗೆ 12 ವರ್ಷ ಶಿಕ್ಷೆ ವಿಧಿಸುವಂತೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯವನ್ನು ಕೋರಿದ್ದರು. ಆದರೆ ಕೇಸು ವಿವರಗಳನ್ನು ಪರಿಶೀಲಿಸಿದ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

230 ಬಿಲಿಯನ್ ಡಾಲರ್ ಕಂಪನಿಯಾದ ಸ್ಯಾಮ್ಸಂಗ್, ವಿಶ್ವದಲ್ಲಿಯೇ ಅತಿ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯಾಗಿದೆ. ದಕ್ಷಿಣ ಕೊರಿಯಾ ಆರ್ಥಿಕತೆಯಲ್ಲಿ ಶೇ.17 ರಷ್ಟು ಪಾಲು ಸ್ಯಾಮಸಂಗ್ ನದ್ದೇ.