ತಮಿಳುನಾಡು ಸರ್ಕಾರ ಬಿಕ್ಕಟ್ಟು: ರಾಜ್ಯಪಾಲರ ಬಳಿ ಇರುವ 4 ಆಯ್ಕೆಗಳು

***

ತಮಿಳುನಾಡಿನ ಆಡಳಿತ ಪಕ್ಷ ಅಣ್ಣಾಡಿಎಂಕೆ ಯಲ್ಲಿ ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್ ಯಾವ ತೀರ್ಮಾನ ಕೈಹೊಳ್ಳಬಹುದು ಎಂಬ ವಿಷಯ ಕುತೂಹಲ ಮೂಡಿಸಿದೆ. ಶಶಿಕಲಾ ರವರನ್ನು ಈಗಾಗಲೇ ಪಕ್ಷದ ಶಾಸಕರು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ತಮಗೆ 130 ಶಾಸಕರ ಬೆಂಬಲವಿದೆ ಎಂದು ಶಶಿಕಲಾ ಗುಂಪು ಹೇಳುತ್ತಿದೆ. ಮತ್ತೊಂದೆಡೆ ತಮಗೂ ಸಹಾ ಬಹುಮತದ ಬೆಂಬಲವಿದೆ, ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಿದರೆ ತಮ್ಮ ಬಲ ತೋರಿಸುವುದಾಗಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳುತ್ತಿದ್ದಾರೆ.

ಶಶಿಕಲಾ ಅಥವಾ ಪನ್ನೀರ್ ಸೆಲ್ವಮ್ ಇಬ್ಬರಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದರೂ ಮ್ಯಾಜಿಕ್ ಸಂಖ್ಯೆ 117 ಇರಲೇಬೇಕು. ಮೆಜಾರಿಟಿ ಶಾಸಕರ ಬೆಂಬಲ ಹೊಂದಿರುವ ಶಿಕಲಾರನ್ನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ರಾಜ್ಯಪಾಲರು ಆಹ್ವಾನಿಸಲೇ ಬೇಕಾ? ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿ ಪಕ್ಷದ ಶಾಸಕರಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿರುವ ಶಶಿಕಲಾ ಪ್ರಮಾಣ ವಚನ ಸ್ವೀಕಾರವನ್ನು ಮುಂದೂಡುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಚಿದಂಬರಂ ಹೇಳಿದ್ದಾರೆ. “ಫಿಯರ್ ಲೆಸ್ ಇನ್ ಅಪೊಸಿಷನ್” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಹುಮತದ ಶಾಸಕರ ಬೆಂಬಲವಿರುವ ನಾಯಕರಿಂದ ಪ್ರಮಾಣವಚನ ಸ್ವೀಕಾರ ಮಾಡಿಸುವ ಸಂವಿಧಾನಬದ್ದ ಜವಾಬ್ದಾರಿ ರಾಜ್ಯಪಾಲರಿಗಿದೆ. ಸದ್ಯದ ಪರಿಸ್ಥಿತಿಗಳನ್ನು ಗಮನಿಸಿ ಪ್ರಮಾಣವಚನ ಸ್ವೀಕಾರವನ್ನು ಹತ್ತು ದಿನಗಳ ಕಾಲ ಮುಂದೂಡುತ್ತಿದ್ದೇನೆ ಎಂದು ಹೇಳುವ ವಿವೇಚನಾಧಿಕಾರ ರಾಜ್ಯಪಾಲರಿಗೆ ಇದೆ. ಇದು ಸಣ್ಣ ಅವಕಾಶವಾಗಿದ್ದು ಸಂವಿಧಾನಬದ್ಧತೆ ಇದಕ್ಕಿದೆಯೇ ಇಲ್ಲವೇ ಎಂದು ನೋಡಿಲ್ಲವಾದರೂ, ಈ ಅವಕಾಶ ರಾಜ್ಯಪಾಲರಿಗೆ ಇದೆ ಎಂದು ಭಾವಿಸುತ್ತಿದ್ದೇನೆ ಎಂದು ಚಿದಂಬರಂ ಹೇಳಿದ್ದಾರೆ.

ಸದ್ಯ ರಾಜ್ಯಪಾಲರ ಬಳಿ ನಾಲ್ಕು ಆಯ್ಕೆಗಳಿವೆ. ಈ ನಾಲ್ಕು ಆಯ್ಕೆಗಳಲ್ಲಿ ಶಶಿಕಲಾರನ್ನು ಕಾಯುವಂತೆ ಹೇಳುವುದು, ಆಕೆಯನ್ನು ಸರ್ಕಾರ ರಚನೆಗೆ ಆಹ್ವಾನಿಸುವುದು, ಪನ್ನೀರ್ ಸೆಲ್ವಂ ಗೆ ಬಹುಮತ ಸಾಬೀತಿಗೆ ಮತ್ತೊಂದು ಅವಕಾಶ ನೀಡುವುದು ಮತ್ತು ರಾಷ್ಟ್ರಪತಿ ಆಡಳಿತ ಹೇರುವುದು. ಇವುಗಳಲ್ಲಿ ಯಾವುದನ್ನು ರಾಜ್ಯಪಾಲರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.