ವಿಜಯ್ ಮಲ್ಯ ಸಾಲ ಮನ್ನಾ ಇಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬೃಹತ್ ಮೊತ್ತದ ಸಾಲ ಉಳಿಸಿಕೊಂಡು ದೇಶ ತೊರೆದು ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯ ಅವರ ಸಾಲವನ್ನು ಬ್ಯಾಂಕ್ ಮನ್ನಾ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಮಲ್ಯ ಸೇರಿದಂತೆ 63 ಸುಸ್ತಿದಾರರ ವಸೂಲಾಗದ ಸಾಲಗಳನ್ನು ರೈಟ್ ಆಫ್ ಮಾಡಲಾಗಿದೆಯೇ ಹೊರತು ಸಂಪೂರ್ಣ ಮನ್ನಾ ಮಾಡಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಲ್ಯಾ ಸೆರಿದಂತೆ ಇತರ ವಸೂಲಾಗದ ಬೃಹತ್ ಸಾಲಗಳನ್ನು ರೈಟ್ ಆಫ್ ಮಾಡಿ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದಿರುವ ‘ಅಕಾ’ (ಅಡ್ವಾನ್ಸ್ ಅಂಡರ್ ಕಲೆಕ್ಷನ್ ಅಕೌಂಟ್ಸ್) ಖಾತೆಗೆ ವರ್ಗಾಯಿಸಲಾಗಿದೆ. ಇದರ ಪ್ರಕಾರ ವಸೂಲಿಯಾಗದಂತಹ ಸಾಲಗಳನ್ನು ಬೇರೆ ಖಾತೆಗೆ ವರ್ಗಾಯಿಸಿ, ಬ್ಯಾಲೆನ್ಸ್ ಶೀಟ್ ನಲ್ಲಿ ಸಾಲದ ಭಾರ ಕಾಣಿಸದಂತೆ ಮಾಡಲಾಗುತ್ತದೆ. ಹೀಗಾದಾಗ ಈ ಸಾಲಗಳು ಮೊದಲು‌ ಬ್ಯಾಲೆನ್ಸ್ ಶೀಟ್ ನಲ್ಲಿ ಕಾಣುವುದಿಲ್ಲ, ಇದರಿಂದ ಬ್ಯಾಂಕ್ ಕಾರ್ಯವೈಖರಿ ಚೇತರಿಕೆ ಕಂಡಂತಾಗುತ್ತದೆ. ಇದರ ಅರ್ಥ ಸಾಲವನ್ನು ಮನ್ನಾ ಮಾಡಿದಂತೆ ಅಲ್ಲ. ಎಂದಿನಂತೆ ಇಂತಹ ಸಾಲಗಳನ್ನು ರೈಟ್ ಆಫ್ ಮಾಡಿದಂತೆ ತೋರಿಸಿದರೂ, ಆ ಸಾಲಗಳನ್ನು ಅಕಾ ಅಕೌಂಟಿನಲ್ಲಿ ಯಥಾರೀತಿ ಇಡಲಾಗುತ್ತದೆ. ಕೊನೆಯ ರೂಪಾಯಿ ವಸೂಲಿಯಾಗುವವರೆಗೂ ಅವುಗಳ ವಸೂಲಿ ಮಾಡುವ ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.