ಬಾಡಿಗೆ ಬಾಕಿ, ಲತಾ ರಜನೀಕಾಂತ್ ಅವರ ಶಾಲೆಗೆ ಬೀಗ? – News Mirchi

ಬಾಡಿಗೆ ಬಾಕಿ, ಲತಾ ರಜನೀಕಾಂತ್ ಅವರ ಶಾಲೆಗೆ ಬೀಗ?

ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರು ನಡೆಸುತ್ತಿದ್ದ ಆಶ್ರಮ್ ಶಾಲೆಗೆ ಬೀಗ ಜಡಿಯಲಾಗಿದೆ. ಚೆನ್ನೈನಲ್ಲಿ ಗಿಂಡಿಯಲ್ಲಿನ ರೇಸ್ ಕೋರ್ಸ್ ಬಳಿಯಿರುವ ಆಶ್ರಮ್ ಶಾಲೆಯನ್ನು ಲತಾ ರಜನೀಕಾಂತ್ ನಡೆಸುತ್ತಿದ್ದು, ಶಿಶುವಿಹಾರದಿಂದ 12 ನೇ ತರಗತಿವರೆಗೆ ಇಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕಳೆದ 5 ವರ್ಷಗಳಿಂದ ಲತಾ ರಜನೀಕಾಂತ್ ಅವರು ಕಟ್ಟಡ ಬಾಡಿಗೆ ಬಾಕಿ ಉಳಿಸಿಕೊಂಡಿದ್ದೇ ಶಾಲೆ ಮುಚ್ಚಲು ಕಾರಣ ಎಂದು ಕಟ್ಟಡದ ಮಾಲೀಕ ವೆಂಕಟೇಶ್ವರುಲು ಹೇಳಿದ್ದಾರೆ.  ಸುಮಾರು 300 ವಿದ್ಯಾರ್ಥಿಗಳಿರುವ ಈ ಶಾಲೆಯ ಗೇಟುಗಳಿಗೆ ಬುಧವಾರ ಬೆಳಗ್ಗೆ ಬೀಗ ಬಿದ್ದಿದ್ದನ್ನು ನೋಡಿದ ನಂತರ ವಿದ್ಯಾರ್ಥಿಗಳನ್ನು ವೆಲಚೆರಿಯಲ್ಲಿರುವ ಶಾಲೆಯ ಮತ್ತೊಂದು ಶಾಖೆಗೆ ಕಳುಹಿಸಲಾಗಿದೆ.

2002 ರಲ್ಲಿ ಶಾಲಾ ಮೈದಾನವನ್ನು ಆಶ್ರಮ ಶಾಲೆಗೆ ನೀಡಲಾಗಿತ್ತು. ಆದರೆ ಸರಿಯಾಗಿ ಬಾಡಿಗೆ ನೀಡುತ್ತಿಲ್ಲದ ಕಾರಣ 2013 ರಲ್ಲಿ ಜಾಗ ಕಟ್ಟಡ ಬಿಟ್ಟುಕೊಡುವಂತೆ ಶಾಲಾ ಆಡಳಿತ ಮಂಡಳಿಗೆ ಕೋರಿದ್ದೆ ಎಂದು ಕಟ್ಟಡದ ಮಾಲೀಕ ವೆಂಕಟೇಶ್ವರುಲು ಹೇಳಿದ್ದಾರೆ.

ಒಂದು ವರ್ಷದ ಹಿಂದೆ ಬಾಕಿ ಇರುವ 10 ಕೋಟಿ ಪಾವತಿಸಿ ಜಾಗ ಬಿಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದೆ. ಅಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಸಲು ಕಷ್ಟ ಎಂದ ಶಾಲಾ ಆಡಳಿತ ಮಂಡಳಿ ಪರ ವಕೀಲರು ಹೇಳಿದ್ದರು. ನಂತರ ಕೇವಲ 2 ಕೋಟಿ ರೂಪಾಯಿ ಪಾವತಿಸಿದ್ದರು. ನಂತರ ಯಾವುದೇ ಬಾಡಿಗೆ ನೀಡಿಲ್ಲ ಮತ್ತು ಈ ಕುರಿತು ಲತಾ ರಜನೀಕಾಂತ್ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ ಎಂದು ವೆಂಕಟೇಶ್ವರುಲು ಆರೋಪಿಸಿದ್ದಾರೆ. ಪ್ರತಿ ತಿಂಗಳು 60 ಸಾವಿರ ರೂಪಾಯಿ ಸರ್ವೀಸ್ ಟ್ಯಾಕ್ ಕಟ್ಟುತ್ತಿದ್ದು, ಕಳೆದ ಬಾರಿ ನನ್ನ ಕೈಯಿಂದ ಕಟ್ಟಿದ್ದೇನೆ, ಈ ಬಾರಿ ಕಟ್ಟಲು ನನ್ನಿಂದ ಸಾಧ್ಯವಿಲ್ಲ, ಹಾಗಾಗಿ ಶಾಲೆ ಖಾಲಿ ಮಾಡಿಸಿ ಆದಾಯ ತೆರಿಗೆ ಇಲಾಖೆಗೆ ಇಲ್ಲಿ ಬಾಡಿಗೆದಾರರು ಇಲ್ಲ ಎಂದು ಹೇಳಬೇಕು ಎಂದು ವೆಂಕಟೇಶ್ವರುಲು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಶಾಲಾ ಆಡಳಿತ ಮಂಡಳಿಯಿಂದ ಅಧಿಕೃತ ಪ್ರಕಟಣೆ ಬಿಡುಗಡೆಯಾಗುವವರೆಗೂ ಕಾಯುವಂತೆ ಆಶ್ರಮ್ ಆಡಳಿತ ಮಂಡಳಿ ಕೋರಿದೆ.

Loading...