ಮಾಲೀಕನ ಮೇಲಿನ ಕೋಪಕ್ಕೆ ನಾಯಿ ಕದ್ದು ಸಿಕ್ಕಿಬಿದ್ದ

***

ತನ್ನ ಉದ್ಯೋಗದಾತರು ಬಯ್ದರು ಎಂದು ಆಕ್ರೋಶಗೊಂಡ ಭದ್ರತಾ ಸಿಬ್ಬಂದಿಯೊಬ್ಬ ಉದ್ಯೋಗದಾತನ 5 ವರ್ಷದ ನಾಯಿಯನ್ನು ಕದ್ದೊಯ್ದ ಘಟನೆ ದೆಹಲಿಯ ಅಶೋಕ ವಿಹಾರ ಪ್ರದೇಶದಲ್ಲಿ ನಡೆದಿದೆ. ನಾಯಿಯನ್ನು ಕದ್ದ ಸೆಕ್ಯೂರಿಟಿ ಗಾರ್ಡ್, ತನ್ನ ಸ್ವಂತ ಊರಾದ ಬುಲಂದಶಹರ್ ಗೆ ಪರಾರಿಯಾಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.

ಜನವರಿ 3 ರಂದು 75 ವರ್ಷದ ರೋಷನ್ ಲಾಲ್ ಗುಪ್ತಾ ಎಂಬುವವರು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಬಾ ಎಂಬ ಸಾಕುನಾಯಿಯನ್ನು ಹೊರಗೆ ಸುತ್ತಾಡಿಸಿಕೊಂಡು ಬರಲು ಹೋಗಿದ್ದ ಸೆಕ್ಯೂರಿಟಿ ಗಾರ್ಡ್ ನಾಯಿಯನ್ನು ಕದ್ದೊಯ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಹಲವು ಬಾರಿ ಪೊಲೀಸರು ಸೆಕ್ಯೂರಿಟಿ ಗಾರ್ಡ್ ಮೊಬೈಲ್ ಗೆ ಕರೆ ಮಾಡಿದರೂ ಆತ ಸ್ಪಂದಿಸಿಲ್ಲ. ಹೀಗಾಗಿ ಆತನನ್ನು ಉದ್ಯೋಗಕ್ಕೆ ಸೇರಿಸಿಕೊಂಡ ಸೆಕ್ಯೂರಿಟಿ ಏಜೆನ್ಸಿಯನ್ನು ಸಂಪರ್ಕಿಸಿ ಆತನ ವಿಳಾಸ ಪಡೆದ ಪೊಲೀಸರು, ಸ್ವಂತ ಊರಿಗೆ ಹೋಗಿ ಬಂಧಿಸಿ ನಾಯಿ ವಶಪಡಿಸಿಕೊಂಡಿದ್ದಾರೆ.

ಮಾಲೀಕನ ಮಗ ಕೆಲ ದಿನಗಳ ಹಿಂದೆ ಕೆಟ್ಟದಾಗಿ ಬಯ್ದಿದ್ದರು, ಹಾಗಾಗಿ ಆತನಿಗೆ ಪಾಠ ಕಲಿಸುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿ ಬಂಧಿತ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾನೆ.