ಮೂವರ ಅತಿಕ್ರಮ ಪ್ರವೇಶ, ಕಾರವಾರದ ನೌಕಾನೆಲೆಯಲ್ಲಿ ಕಟ್ಟೆಚ್ಚರ

ಗುರುವಾರ 3 ಜನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಂಪೌಂಡ್ ಗೋಡೆ ಹಾರಿ ನೌಕಾನೆಲೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಕಾರವಾರದ ನೌಕಾ ನೆಲೆ ಐ.ಎನ್.ಎಸ್ ಕದಂಬ ಸುತ್ತ ಮುತ್ತಲಿನ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗುರುವಾರ ಮೂರು ಅತಿಕ್ರಮಣಕಾರರು ನೌಕಾನೆಲೆಯೊಳಗೆ ಕಾಣಿಸಿಕೊಂಡಿದ್ದು, ಸಿಬ್ಬಂದಿ ಬಂಧಿಸಲು ಮುಂದಾಗುತ್ತಿದ್ದಂತೆ ಅತಿಕ್ರಮಣಕಾರರು ಪರಾರಿಯಾಗಿದ್ದರು. ನಂತರ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸಿ ಯಾರೂ ಅಡಗಿಲ್ಲ ಎಂದು ಖಚಿತಪಡಿಸಿಕೊಳ್ಳಲಾಯಿತು. ಸ್ಥಳೀಯ ಪೊಲೀಸರು ಮತ್ತು ಶ್ವಾನ ದಳ ಈ ಶೋಧ ಕಾರ್ಯದಲ್ಲಿ ತೊಡಗಿದ್ದರು.

ಗುರುವಾರ ಬೆಳಗ್ಗೆ ಸುಮಾರು 8:30 ರ ವೇಳೆಯಲ್ಲಿ ಮೂವರು ಆಗಂತುಕರು ನೌಕಾನೆಲೆಯನ್ನು ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಪ್ರವೇಶಿಸುತ್ತಿದ್ದಾರೆಂದು ಸಿಸಿಟಿವಿ ಮೂಲಕ ತಿಳಿದು ಬಂದಿದೆ ಎಂದು ಕಂಟ್ರೋಲ್ ರೂಮಿನಿಂದ ಎಚ್ಚರಿಕೆ ಬಂದಿತ್ತು. ನಂತರ ಎಲ್ಲಾ ಗೇಟುಗಳನ್ನು ಮುಚ್ಚಲಾಗಿತ್ತು.