ಪಾಕಿಸ್ತಾನ ಮಧ್ಯಂತರ ಪ್ರಧಾನಿಯಾಗಿ ಅಬ್ಬಾಸಿ

ಇಸ್ಲಾಮಾಬಾದ್: ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ನಾಯಕ ಶಾಹಿದ್ ಖಖಾನ್ ಅಬ್ಬಾಸಿ ಯವರು ಪಾಕಿಸ್ತಾನದ ತಾತ್ಕಾಲಿಕ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನವಾಜ್ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹರೆಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಆಯ್ಕೆ ಅನಿವಾರ್ಯವಾಗಿತ್ತು.

ಸಂಸತ್ತಿನಲ್ಲಿ ಒಟ್ಟು 321 ಮತಗಳಿದ್ದು, ನವಾಜ್ ಷರೀಫ್ ಆಪ್ತನಾಗಿರುವ ಅಬ್ಬಾಸಿಯವರಿಗೆ 221 ಮತಗಳು ಬಂದಿವೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಯ ನವೀದ್ ಗೆ 47 ಮತ, ತೆಹ್ರಿಕ್ ಇನ್ಸಾಫ್ ನಾಯಕ ರಷೀದ್ ಅಹಮದ್ ಗೆ 33 ಮತ, ಜಮಾತ್-ಇ-ಇಸ್ಲಾಮಿ ಮುಖಂಡ ತರೀಖುಲ್ಲಾಗೆ ನಾಲ್ಕು ಮತಗಳು ಬಂದವು. ನಂತರ ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಬ್ಬಾಸಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಬ್ಬಾಸಿಯವರು 45 ದಿನಗಳ ಕಾಲ ತಾತ್ಕಾಲಿಕ ಪ್ರಧಾನಿಯಾಗಲಿದ್ದಾರೆ.