uddhav

ಎನ್.ಡಿ.ಎ ಯಿಂದ ಹೊರ ಹೋಗುತ್ತಿರುವ ಶಿವಸೇನೆ, 2019 ರಲ್ಲಿ ಏಕಾಂಗಿ ಸ್ಪರ್ಧೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ತೀರ್ಮಾನಕ್ಕೆ ಶಿವಸೇನೆ ಬಂದಿದೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಉದ್ಧವ್ ಠಾಕ್ರೆ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 2019 ರಲ್ಲಿ ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಣಯ ಮಂಡಿಸಿದ ನಂತರ ಸರ್ವಾನುಮತದ ಅಂಗೀಕಾರ ದೊರೆತಿದೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ಮುಂದಿನ ಚುನಾವಣೆಯಲ್ಲಿ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಿ 48 ಕ್ಷೇತ್ರಗಳ ಪೈಕಿ ಕನಿಷ್ಠ 25 ಕ್ಷೇತ್ರಗಳಲ್ಲಿ, ಹಾಗೂ 288 ವಿಧಾನಸಭಾ ಕ್ಷೇತ್ರಗಳ ಪೈಕಿ 125 ಸ್ಥಾನಗಳಲ್ಲಿ ಗೆಲುವು ಸಾಧಸಲಿದೆ ಎಂದು ಭವಿಷ್ಯ ನುಡಿದರು. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ನಾವೂ ಹಿಂದುತ್ವದ ಕಾರಣಕ್ಕಾಗಿ ಸಹನೆಯಿಂದ ಇದ್ದೆವು. ಆದರೆ ಕಳೆದ ಮೂರು ವರ್ಷಗಳಲ್ಲಿ ಶಿವಸೇನೆಯನ್ನು ಅಧಿಕಾರ ಬಳಸಿ ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾವತ್ ಆರೋಪಿಸಿದ್ದಾರೆ.

ಶಿವಸೇನೆ ಎನ್.ಡಿ.ಎ ಮೈತ್ರಿಕೂಟದ ಹಳೆಯ ಮಿತ್ರ. 90 ರ ದಶಕದಲ್ಲಿ ಎರಡೂ ಪಕ್ಷಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಲು ಒಂದಾಗಿದ್ದವು. ಆ ಸಂದರ್ಭದಲ್ಲಿ ಶಿವಸೇನೆ ರಾಜ್ಯ ರಾಜಕಾರಣದಲ್ಲಿ ಪ್ರಬಲ ಪಕ್ಷವಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರಬೀಳುವ ಹೊತ್ತಿಗೆ ಮೈತ್ರಿ ಮುರಿದು ಕಣಕ್ಕಿಳಿದಿದ್ದ ಶಿವಸೇನೆ ಸುಸ್ತು ಹೊಡೆದಿತ್ತು. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಎನ್.ಜೆ.ಪಿ ಮತ್ತು ಶಿವಸೇನೆಗಳೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ತನ್ನ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿತ್ತು.