ಬ್ರಿಟನ್ ಸಂಸತ್ತಿಗೆ ಚುನಾವಣೆ, ಅತಂತ್ರ ಫಲಿತಾಂಶ

ಬ್ರಿಟನ್ ಸಂಸತ್ ಗೆ ನಡೆದ ಚುನಾವಣೆಯಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ಪಡೆಯಲು ಆಡಳಿತ ಪಕ್ಷ ಕನ್ಸರ್ವೇಟಿವ್ ವಿಫಲವಾಗಿದೆ. ಹೀಗಾಗಿ ಸದ್ಯದ ಪ್ರಧಾನಿ ಥೆರೆಸಾ ಮೇ ಮುಂದಿನ ದಾರಿ ಗೊಂದಲದಲ್ಲಿದೆ. ಅತಂತ್ರ ಸ್ಥಿತಿ ಸೃಷ್ಟಿಯಾಗಿರುವುದರಿಂದ ಆಕೆ ಇತರೆ ಪಕ್ಷಗಳ ಬೆಂಬಲ ಕೋರುವ ಸಾಧ್ಯತೆಗಳಿವೆ.

ಚುನಾವಣೆಯ ಫಲಿತಾಂಶದಿಂದ ಆಶ್ಚರ್ಯವಾಗಿದೆ, ಆದರೆ ಬ್ರೆಕ್ಸಿಟ್ ಕುರಿತ ವಿಷಯದಲ್ಲಿ ದೇಶ ತೆಗೆದುಕೊಂಡ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಫ್ರಾನ್ಸ್ ಪ್ರಧಾನಿ ಫಿಲಿಪ್ ಹೇಳಿದ್ದಾರೆ. ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿರುವುದಕ್ಕೆ ಯೂರೋಪಿಯನ್ ಯೂನಿಯನ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶದಿಂದ ಬ್ರೆಕ್ಸಿಟ್ ಸಂಬಂಧಿತ ಚರ್ಚೆಗಳು ತಡವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಬಹುಮತ ಪಡೆಯಲು ವಿಫಲವಾದ ಥೆರೆಸಾ ಮೇ ಕೂಡಲೇ ರಾಜೀನಾಮೆ ನೀಡಬೇಕೆಂದು ಲೇಬರ್ ಪಕ್ಷ ಒತ್ತಾಯಿಸಿದೆ. ಆದರೆ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕನ್ಸರ್ವೇಟಿವ್ ಪಕ್ಷ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತದೆ ಎಂದು ಬ್ರಿಟೀಷ್ ಮಾಧ್ಯಮಗಳು ಹೇಳುತ್ತಿವೆ.

ಒಟ್ಟು 650 ಸ್ಥಾನಗಳಿರುವ ಬ್ರಿಟನ್ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯಿತು. 647 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು, ಕನ್ಸರ್ವೇಟಿವ್ ಪಕ್ಷ 316 ಸ್ಥಾನಗಳನ್ನು ಗೆದ್ದಿದೆ. ಆದರೆ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ 316 ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಪ್ರತಿಪಕ್ಷವಾದ ಲೇಬರ್ ಪಾರ್ಟಿ 261 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.