ಶ್ರವಣಬೆಳಗೊಳದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ (ಬಾಹುಬಲಿ)

ಕರ್ನಾಟಕದ ಪ್ರಸಿದ್ಧ ಜೈನ ದೇವಾಲಯ ಶ್ರವಣಬೆಳಗೊಳ. ಇಲ್ಲಿ ಜೈನ ತೀರ್ಥಂಕರರಲ್ಲಿ ಒಬ್ಬರಾದ ಗೊಮ್ಮಟೇಶ್ವರ(ಬಾಹುಬಲಿ) ನಿಂತಿರುವ ಭಂಗಿಯಲ್ಲಿ 57 ಅಡಿಗಳ(17 ಮೀಟರ್) ಏಷ್ಯಾದಲ್ಲಿಯೇ ಅತಿ ಎತ್ತರದ ಏಕಶಿಲಾ ವಿಗ್ರಹವಿದೆ. ಹಾಸನ ಜಿಲ್ಲೆಯ ಚಂದ್ರಗಿರಿಯ ಮೇಲೆ ಈ ಕ್ಷೇತ್ರವಿದೆ. ಹಾಸನದಿಂದ 52 ಕಿ.ಮೀ, ಮೈಸೂರಿನಿಂದ 93 ಕಿ.ಮೀ., ಬೆಂಗಳೂರಿನಿಂದ 158 ಕಿ.ಮೀ ದೂರದಲ್ಲಿದೆ ಶ್ರವಣಬೆಳಗೊಳ. ಚಂದ್ರಗಿರಿ ಮತ್ತು ವಿಂದ್ಯಗಿರಿ ಎಂಬ ಎರಡು ಗುಡ್ಡಗಳ ಮೇಲಿರುವ ಜೈನರ ಈ ಪವಿತ್ರ ಕ್ಷೇತ್ರದಲ್ಲಿ ಜೈನ ಸಂಸ್ಕೃತಿ ಕಂಡು ಬರುತ್ತದೆ.

ಬಾಹುಬಲಿಯನ್ನು ಗೊಮ್ಮಟೇಶ್ವರ ಎಂದೂ ಕರೆಯುವರು. ಜೈನ ಧರ್ಮ ಆಚರಿಸಿದ ಗಂಗವಂಶದ ಅರಸರಲ್ಲಿ ಎರಡನೇ ರಾಜಮಲ್ಲನ ಬಳಿ ಮಂತ್ರಿಯಾಗಿದ್ದ ಚಾವುಂಡರಾಯ ಇಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ಕ್ರಿ.ಶ.983 ರಲ್ಲಿ ಸ್ಥಾಪಿಸಿದರು. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಶಿಷ್ಯನಾದ ಅರಿಷ್ಟನೇಮಿ ಎಂಬಾತ ಈ ವಿಗ್ರಹವನ್ನು ಕೆತ್ತಿದನೆಂದು ಹೇಳಲಾಗಿದೆ. ವಿಂದ್ಯಗಿರಿಯ 600 ಮೆಟ್ಟಿಲು ಹತ್ತಿದರೆ ಈ ಅದ್ಭುತವಾದ ಈ ಎತ್ತರದ ಬಾಹುಬಲಿ ದರ್ಶನವಾಗುತ್ತದೆ.

12 ವರ್ಷಗಳಿಗೊಮ್ಮೆ ಇಲ್ಲಿ ಗೊಮ್ಮಟೇಶ್ವರನಿಗೆ ಮಹಾ ಮಸ್ತಕಾಭಿಷೇಕ ನಡೆಯುತ್ತದೆ. ಪವಿತ್ರ ಗಂಗೆ,ಹಾಲು, ತುಪ್ಪ, ಪಂಚಾಮೃತ, ಪಂಚಲೋಹ ಮಿಶ್ರಿತ ಜಲದಿಂದ ವೇದ ಪಂಡಿತರು ಅಭಿಷೇಕ ಮಾಡುತ್ತಾರೆ. ಸೂರ್ಯ ವಂಶದ ರಾಜರಲ್ಲಿ ಒಬ್ಬರಾದ ಋಷಭನ ಎರಡನೇ ಪುತ್ರನೇ ಬಾಹುಬಲಿ. ಮೊದಲ ಪುತ್ರ ಭರತ. ಭರತ ತನ್ನ ರಾಜ್ಯವನ್ನು ಆಳುತ್ತಾ, ತನ್ನ ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬೇರೆ ರಾಜ್ಯಗಳ ಮೇಲೆ ದಂಡಯಾತ್ರೆ ಕೈಗೊಳ್ಳಲು ಮುಂದಾದ. ಆದರೆ ತಮ್ಮನಾದ ಬಾಹುಬಲಿ ಇದನ್ನು ವಿರೋಧಿಸಿ ಅಣ್ಣನೊಂದಿಗೆ ಯುದ್ಧ ಮಾಡಿದ. ನಂತರ ವೈರಾಗ್ಯ ತಾಳಿ ತಪಸ್ಸಿಗೆ ಕೂತ. ಜೈನರ ಆದಿ ದೇವರಾದ ಆದಿನಾಥನೇ ಬಂದು ಮಂತ್ರೋಪದೇಶ ಮಾಡಿದ ನಂತರ ಬಾಹುಬಲಿ ಮೋಕ್ಷ ಹೊಂದಿದನೆಂದು ಪುರಾಣಗಳು ಹೇಳುತ್ತಿವೆ. ಇದೇ ಸ್ಥಳದಲ್ಲಿ ಅದೆಷ್ಟೋ ಜೈನ ಮುನಿಗಳು ತಪಸ್ಸು ಮಾಡಿ ಮೋಕ್ಷ ಪಡೆದರಂತೆ. ಬಾಹುಬಲಿ ತಪಸ್ಸು ಮಾಡಿ ಮೋಕ್ಷ ಪಡೆದ ಈ ಸ್ಥಳದಲ್ಲಿಯೇ ಗೊಮ್ಮಟೇಶ್ವರ(ಬಾಹುಬಲಿ) ವಿಗ್ರಹ ಸ್ಥಾಪನೆಯಾಗಿದೆ.

ವಸತಿ ಸೌಲಭ್ಯ: ಇಲ್ಲಿ ದೇವಾಲಯದವರು ಧರ್ಮಶಾಲೆಗಳನ್ನು ನಡೆಸುತ್ತಿದ್ದಾರೆ. ದಿನವೊಂದಕ್ಕೆ ರೂ. 200 ಬಾಡಿಗೆಯೊಂದಿಗೆ ವಸತಿ ಸೌಕರ್ಯ ಲಭಿಸುತ್ತದೆ. ದೂರವಾಣಿ ಸಂಖ್ಯೆ: 08176-57258. ಖಾಸಗಿ ಲಾಡ್ಜ್ ಗಳೂ ಲಭಿಸುತ್ತವೆ.

ಶ್ರವಣಬೆಳಗೊಳದಿಂದ ಸುಮಾರು 80 ಕಿ.ಮೀ ದೂರದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಾದದ ಬೇಲೂರು, 60 ಕಿ.ಮೀ ದೂರದಲ್ಲಿ ಹಳೇಬೀಡುಗಳಿವೆ.