ಕಾಂಗ್ರೆಸ್ ಜೊತೆ ಮೈತ್ರಿಗೆ ಹಿನ್ನೆಡೆ: ರಾಜೀನಾಮೆಗೆ ಸಿದ್ಧರಾದ ಯೆಚೂರಿ?

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಪಕ್ಷದ ನಾಯಕತ್ವದ ಮನವೊಲಿಸುವಲ್ಲಿ ಅವರು ಎರಡನೇ ಬಾರಿಗೆ ವಿಫಲರಾಗಿದ್ದಾರೆ. ಯೆಚೂರಿ ಮಾಡಿದ್ದ ಪ್ರಸ್ತಾಪವನ್ನು ಕೇಂದ್ರ ಸಮಿತಿ ಅಂಗೀಕರಿಸಿಲ್ಲ, ಇದರಿಂದಾಗಿ ಈಗ ಅವರು ರಾಜೀನಾಮೆಗೆ ಸಿದ್ಧರಾದ ಮಾತುಗಳು ಕೇಳಿಬರುತ್ತಿವೆ.

ಕೋಲ್ಕತಾದಲ್ಲಿ ನಡೆದ ಕೇಂದ್ರ ಸಮಿತಿ ಮತದಾನದಲ್ಲಿ 55-31 ಮತಗಳ ಅಂತರದಲ್ಲಿ ಯೆಚೂರಿ ಪ್ರಸ್ತಾಪ ತಿರಸ್ಕೃತವಾಗಿದೆ. ಹೀಗಾಗಿ ಬೇಸರಗೊಂಡಿರುವ ಯೆಚೂರಿ ರಾಜೀನಾಮೆಗೆ ಸಿದ್ಧರಾಗಿದ್ದರು. ಆದರೆ ಯೆಚೂರಿ ಮುಂದುವರೆಯಬೇಕು ಎಂದು ಪಾಲಿಟ್ ಬ್ಯೂರೋ, ಕೇಂದ್ರ ಸಮಿತಿ ಮನವಿ ಮಾಡಿದ್ದರಿಂದಾಗಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಂತೆ ಕಂಡಿತು. ಆದರೂ ಏಪ್ರಿಲ್ ನಲ್ಲಿ ಹೈದರಾಬಾದ್ ನಲ್ಲಿ ಪಕ್ಷ ನಡೆಸಲಿರುವ ಆಂತರಿಕ ಸಮಾವೇಶದಲ್ಲಿ ಈ ವಿಷಯದಲ್ಲಿ ಮತ್ತೊಮ್ಮೆ ತಮ್ಮ ಪಟ್ಟು ಸಾಧಿಸಲು ಸಿದ್ಧವಾಗುತ್ತಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯ ಪ್ರಸ್ತಾವನೆ

2019 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಏಕೈಕ ಗುರಿಯನ್ನು ಸಿಪಿಎಂ ಪಕ್ಷ ಆರು ತಿಂಗಳ ಹಿಂದೆ ತೀರ್ಮಾನ ಕೈಗೊಂಡಿತ್ತು. ಪಕ್ಷದ ಮತ ಬ್ಯಾಂಕ್ ವೃದ್ಧಿಯಾಗಬೇಕೆಂದರೆ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಯೆಚೂರಿ ಒಂದು ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ಆದರೆ, ಅದು ಜನರಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ ಮತ್ತು ಪಕ್ಷದ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದ್ದು ಮೋಸದ ರಾಜಕೀಯ ಎಂದು ಹೇಳಿ ಹಿರಿಯ ನಾಯಕ ಪ್ರಕಾಶ್ ಕಾರಟ್ ಆ ಪ್ರಸ್ತಾಪವನ್ನು ವಿರೋಧಿಸಿದ್ದರು. ಯೆಚೂರಿ ಪ್ರಸ್ತಾಪಕ್ಕೆ ಅಚ್ಯುತಾನಂದನ್ ಬೆಂಬಲಿಸಿದರೆ, ಪ್ರಕಾಶ್ ಅವರ ನಿಲುವನ್ನು ಕೇರಳ, ಆಂಧ್ರಪ್ರದೇಶ ನಾಯಕರು, ಪಕ್ಷದ ಕಾರ್ಮಿಕ ವಿಭಾಗ ಸಿಐಟಿಯು ಬೆಂಬಲಿಸಿದ್ದವು.

ಓಟಿಂಗ್ ನಲ್ಲಿ ಸೋಲು

ಕಾಂಗ್ರೆಸ್ ನೊಂದಿಗೆ ಮೈತ್ರಿ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಕೋಲ್ಕತಾದಲ್ಲಿ ನಡೆಸಿದ ಸಭೆಯಲ್ಲಿ ಕೇಂದ್ರ ಸಮಿತಿ ಮೂರು ದಿನಗಳ ಕಾಲ ಯೆಚೂರಿ-ಕಾರಟ್ ನಿಲುವುಗಳ ಕುರಿತು ಚರ್ಚೆ ನಡೆಸಿತು. ಶನಿವಾರ ರಾತ್ರಿಯವರೆಗೂ ಈ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಭಾನುವಾರ ಓಟಿಂಗ್ ನಡೆಸಿತು. ಸದ್ಯ ಕೇಂದ್ರ ಸಮಿತಿಯಲ್ಲಿ 91 ಸದಸ್ಯರಿದ್ದು, ಇವರಲ್ಲಿ 55 ಸದಸ್ಯರು ಪ್ರಕಾಶ್ ಕಾರಟ್ ನಿಲುವಿಗೆ ಮತ ಹಾಕಿದರೆ, 31 ಜನರು ಯೆಚೂರಿ ಪ್ರಸ್ತಾವನೆಗೆ ಬೆಂಬಲಿಸಿ ಮತ ಹಾಕಿದರು. ಇನ್ನು ಉಳಿದವರು ತಟಸ್ಥರಾಗಿ ನಿಂತರು. ಹೀಗಾಗಿ ಯೆಚೂರಿ ಪ್ರಸ್ತಾಪ ತಿರಸ್ಕೃತವಾಯಿತು.

ಸೀತಾರಾಂ ಯೆಚೂರಿಗೆ ಪಶ್ಚಿಮ ಬಂಗಾಳ ಘಟಕ ಆರಂಭದಿಂದಲೂ ಪ್ರಬಲ ಬೆಂಬಲ ನೀಡುತ್ತಾ ಬಂದಿದೆ. ಪ್ರಸ್ತಾವನೆ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಘಟಕ ಒಂದು ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಸ್ತಾವನೆ ಮಾತ್ರ ತಿರಸ್ಕೃತಗೊಂಡಿದೆ, ಆದರೆ ಯೆಚೂರಿಯವರು ಸೋತಿಲ್ಲ. ಆಂತರಿಕ ಸಮಾವೇಶದಲ್ಲಿ ಈ ವಿಷಯದ ಕುರಿತು ನಿರ್ಣಾಯಕ ಹೋರಾಟ ನಡೆಸುತ್ತೇವೆ ಎಂದು ಹೇಳಿದೆ.

Get Latest updates on WhatsApp. Send ‘Subscribe’ to 8550851559