ಆರ್.ಎಸ್.ಎಸ್ ನವರು ಉಗ್ರಗಾಮಿಗಳೆಂದ ಸಿಎಂ: ತಲೆ ಕೆಟ್ಟಿದೆ ಎಂದ ಸೋಮಣ್ಣ |News Mirchi

ಆರ್.ಎಸ್.ಎಸ್ ನವರು ಉಗ್ರಗಾಮಿಗಳೆಂದ ಸಿಎಂ: ತಲೆ ಕೆಟ್ಟಿದೆ ಎಂದ ಸೋಮಣ್ಣ

ಬಿಜೆಪಿ ಮತ್ತು ಆರ್.ಎಸ್.ಎಸ್ ಕೂಡಾ ಉಗ್ರಗಾಮಿಗಳು ಎಂದು ಬುಧವಾರ ವಿವಾದಿತ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಬಿಜೆಪಿ, ಆರ್.ಎಸ್.ಎಸ್ ಕುರಿತು ಹೇಳಿಕೆ ನೀಡಿರಲಿಲ್ಲ, ಬದಲಿಗೆ ಹಿಂದುತ್ವ ಉಗ್ರವಾದದ ಕುರಿತು ತಾವು ಮಾತನಾಡಿರುವುದಾಗಿ ಹೇಳಿದ್ದಾರೆ.

ಮೈಸೂರು ಸಮೀಪ ಎಂ.ಎಂ.ಹಿಲ್ಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಾವು ಹಿಂದುತ್ವ ಉಗ್ರವಾದದ ಬಗ್ಗೆ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮತ್ತು ಆರ್.ಎಸ್.ಎಸ್ ಹಿಂದುತ್ವ ಉಗ್ರವಾದದ ಪ್ರಚಾರ ನಡೆಸುತ್ತಿದ್ದಾರೆ, ಯಾರು ದ್ವೇಷಭಾವನೆಯನ್ನು ಪಸರಿಸಿ ಗಲಭೆಗಳಿಗೆ ಕಾರಣವಾಗುತ್ತಾರೋ ಅವರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಹೇಳಿದ್ದಾಗಿ ಮಾತು ಬದಲಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಹೇಳಿಕೆಗೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ತಾಲಿಬಾನ್ ಉಗ್ರರೊಂದಿಗೆ ಸಂಪರ್ಕವಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದವರು, ಇಲ್ಲಿ ಬಾಂಬ್ ಇಟ್ಟು ಭಾರತವನ್ನೂ ಪಾಕಿಸ್ತಾನ ಮಾಡಲು ಹೊರಟಿರುವವರು ಸಿದ್ದರಾಮಯ್ಯನವರಿಗೆ ನೆಂಟರಂತೆ ಕಾಣುತ್ತಿದ್ದಾರೆ. ಹೀಗಾಗಿಯೇ ಅವರು ಆರ್.ಎಸ್.ಎಸ್ ಮತ್ತು ಬಿಜೆಪಿಯವರು ಉಗ್ರಗಾಮಿಗಳು ಎಂದು ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದರು.

ಮತ್ತೊಬ್ಬ ಮುಖಂಡ ವಿ.ಸೋಮಣ್ಣ ಈ ಕುರಿತು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರಿಗೆ ಎಲ್ಲೋ ತಲೆ ಕೆಟ್ಟೋಗಿದೆ. ರಾಜ್ಯವನ್ನು ಕೇರಳವನ್ನಾಗಿ ಮಾಡಲು ಹೊರಟಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ಸಿದ್ದರಾಮಯ್ಯ ಮೃದುಧೋರಣೆ ತೋರಬೇಡಿ, ಇದು ನಿಮಗೆ ಒಳ್ಳೆಯದಲ್ಲ. ಆರ್.ಎಸ್.ಎಸ್ ಮತ್ತು ಭಜರಂಗದಳಗಳು ಈ ರಾಜ್ಯದ ಬೆನ್ನೆಲುಬು, ಸಮಾನತೆಗಾಗಿ ಆರ್.ಎಸ್.ಎಸ್ ಬಹುದೊಡ್ಡ ಕೊಡುಗೆ ಕೊಟ್ಟಿದೆ. ಅಂತಹ ಸಂಘಟನೆಗಳ ಬಗ್ಗೆ ಒಬ್ಬ ಮುಖ್ಯಮಂತ್ರಿ ಈ ರೀತಿ ಮಾತನಾಡ್ತಾರೆ ಅಂದ್ರೆ ಈ ರಾಜ್ಯದ ಜನರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!