ಸಿದ್ದಗಂಗಾ ಶ್ರೀಗಳ ಹೆಸರು ದುರ್ಬಳಕೆ, ಸಚಿವ ಎಂ.ಬಿ ಪಾಟೀಲ್ ಗೆ ಮುಖಭಂಗ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತುಮಕೂರು ಸಿದ್ದಗಂಗಾ ಶ್ರೀಗಳು ಬೆಂಬಲ ಸೂಚಿಸಿದ್ದಾರೆ ಎಂದು ಹೇಳುತ್ತಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶ್ರೀಗಳು ಬೆಂಬಲ ಸೂಚಿಸಿರುವಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಶ್ರೀಗಳು ಈ ವಿಷಯದಲ್ಲಿ ಬೆಂಬಲವನ್ನು ಸೂಚಿಸಿಲ್ಲ ಎಂದು ಮಠದ ಪ್ರಕಟಣೆ ಹೇಳಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದದಲ್ಲಿ ಶ್ರೀಗಳನ್ನು ಎಳೆದು ತರಲು ಯತ್ನಿಸಿರುವ ಸಚಿವರ ನಡೆಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಎಂ.ಬಿ.ಪಾಟೀಲ್ ವಿರುದ್ಧ ಮಾಜಿ ಸಚಿವ ಸೋಮಣ್ಣ ವಾಗ್ದಾಳಿ ನಡೆಸಿದ್ದು, ಸಿದ್ಧಗಂಗಾ ಮಠದ ಮೇಲೆ ಆಣೆ ಮಾಡಿ ಸುಳ್ಳು ಹೇಳಿದವರು ಉದ್ಧಾರ ಆಗಿಲ್ಲ. ಶ್ರೀಗಳು ಬೆಂಬಲ ಸೂಚಿಸಿದ್ದರು ಎಂದ ಪದೇ ಪದೇ ಹೇಳುತ್ತಿರುವ ಪಾಟೀಲರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಉತ್ತಮ ಎಂದು ಸೋಮಣ್ಣ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ನಿಮಗ್ಯಾಕೆ ಅಷ್ಟೊಂದು ಅಸೂಯೆ ಹುಟ್ಟಿಕೊಂಡಿದೆ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಬಗ್ಗೆ ನಿಮಗೆ ಸರಿಯಾಗಿ ಗೊತ್ತಿಲ್ಲ. ಅವರು ಪವಾಡ ಪರುಷುರು, ನಿಮಗೆ ಗೌರವ ಇದ್ದರೆ, ನಿಮಗೆ ಸ್ವಾಭಿಮಾನ ಇದ್ದರೆ ಇನ್ನಾದರೂ ಶ್ರೀಗಳ ಹೆಸರು ಬಳಕೆ ಮಾಡುವುದನ್ನು ಬಿಡಿ ಎಂದು ಸಚಿವರಿಗೆ ಸಲಹೆ ನೀಡಿದರು.

ವೀರಶೈವ ಲಿಂಗಾಯಿತ ಧರ್ಮ ಒಂದು ಮಾಡಬೇಕು, ಮಾಡಿದರೆ ಯಾವ ರೀತಿ ಮಾಡಬೇಕು ಎಂಬುದನ್ನು ನೋಡ್ಕೊಳ್ಳೋಕೆ ಅಖಿಲ ಭಾರತ ವೀರಶೈವ ಮಹಾಸಭಾ ಇದೆ, ಸಾವಿರಾರು ಜನ ಬುದ್ದಿಜೀವಿಗಳು, ಮಠಮಾನ್ಯಗಳಿವೆ. ಇವರೆಲ್ಲಾ ಕೂತು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ಬಗೆಹರಿಸಬೇಕು ಎಂಬುದನ್ನು ಚರ್ಚೆ ಮಾಡ್ತಾರೆ. ಅವರ ಜೊತೆ ಕೈಜೋಡಿಸುವುದಾದರೆ ಕೈಜೋಡಿಸಿ. ಅದನ್ನು ಹೊರತುಪಡಿಸಿ ನೀವು ಈ ವಿಷಯದಲ್ಲಿ ನಾನು ಹೇಳಿದ್ದೇ ನಡೆಯಬೇಕು ಎಂದು ವರ್ತಿಸಿದರೆ ನಿಮ್ಮ ಗೌರವ ಕಳೆದುಕೊಳ್ತೀರಿ ಎಂದು ಸೋಮಣ್ಣ ಸಚಿವರಿಗೆ ಬುದ್ದಿ ಮಾತು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559