ರಜನಿ ಮಗಳಿಗೆ ವಿಚ್ಛೇದನ ಮಂಜೂರು

ರಜನೀಕಾಂತ್ ಕಿರಿಯ ಮಗಳು ಸೌಂದರ್ಯ ತನ್ನ ಪತಿ, ಚೆನ್ನೈನ ಉದ್ಯಮಿ ಅಶ್ವಿನ್ ಅವರಿಂದ ಕೆಲ ಕಾಲದಿಂದ ದೂರವಿರುವ ವಿಷಯ ತಿಳಿದದ್ದೇ. ಕಳೆದ ಸೆಪ್ಟೆಂಬರ್ ನಿಂದಲೂ ಇಬ್ಬರೂ ದೂರವಾಗಿದ್ದಾಗಿ ಅವರೇ ಹೇಳಿಕೊಂಡಿದ್ದರು. ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯ ಮಂಗಳವಾರ ಅಧಿಕೃತವಾಗಿ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ.

2010 ರಲ್ಲಿ ರಜನಿ ಕಿರಿಯ ಪುತ್ರಿ ಸೌಂದರ್ಯ ವಿವಾಹವಾಗಿದ್ದು, ಸುಮಾರು 5 ವರ್ಷಗಳ ಕಾಲ ಸುಖ ಸಂಸಾರ ಸಾಗಿಸಿದ್ದರು. 2015 ರಲ್ಲಿ ಅವರಿಗೆ ಒಂದು ಮಗುವಿನ ಜನನವೂ ಆಯಿತು. ಮಗನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಣ್ಣ ವಿವಾದ ದೊಡ್ಡ ಜಗಳಕ್ಕೆ ಕಾರಣವಾಗಿ, ಇದೀಗ ವಿಚ್ಛೇದನ ನೀಡುವವರೆಗೂ ಬಂದು ನಿಂತಿದೆ.

ದಂಪತಿಗಳಿಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ದೂರವಾಗಲು ನಿರ್ಧರಿಸಿದ್ದರೂ, ರಜನಿಕಾಂತ್ ಕುಟುಂಬ ಸದಸ್ಯರು ಇಬ್ಬರನ್ನೂ ಮತ್ತೆ ಒಂದು ಮಾಡಲು ಹಲವು ಪ್ರಯತ್ನಗಳನ್ನು ಮಾಡಿ ವಿಫಲರಾಗಿದ್ದರು. ಕೆಲ ದಿನಗಳಿಂದ ತವರಿನಲ್ಲಿಯೇ ಇರುವ ಸೌಂದರ್ಯ, ಸದ್ಯ ಚಿತ್ರರಂಗವನ್ನೇ ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಅಪ್ಪ ರಜನೀಕಾಂತ್ ನಟನೆಯ “ಕೊಚ್ಚಾಡಿಯನ್” ಚಿತ್ರದ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸೌಂದರ್ಯ, ಈಗ ಧನುಷ್ ನಾಯಕನಾಗಿ ವಿಐಪಿ2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.