ರಾಜಕಾರಣಿಗಳ ಪ್ರಕರಣಗಳ ತ್ವರಿತ ವಿಚಾರಣೆಗೆ ಸ್ಪೆಷಲ್ ಕೋರ್ಟ್ – News Mirchi

ರಾಜಕಾರಣಿಗಳ ಪ್ರಕರಣಗಳ ತ್ವರಿತ ವಿಚಾರಣೆಗೆ ಸ್ಪೆಷಲ್ ಕೋರ್ಟ್

ನವದೆಹಲಿ: ರಾಜಕಾರಣಿಗಳ ಕೈವಾಡವಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ವಿಶೇಷ ನ್ಯಾಯಾಲಯಗಳನ್ನು ರಚನೆ ಮಾಡುವ ಕುರಿತಂತೆ ಸುಪ್ರೀಂ ಕೋರ್ಟ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿ, ಅಗತ್ಯ ಆರ್ಥಿಕ ನಿಧಿಯ ಅಂದಾಜು ನಡೆಸಿ, ಆ ವಿವರಗಳನ್ನು ತಮಗೆ ನೀಡಬೇಕೆಂದು ಜಸ್ಟೀಸ್ ರಂಜನ್ ಗೋಗೋಯ್, ಜಸ್ಟೀಸ್ ನವೀನ್ ಸಿನ್ಹಾ ಅವರ ನ್ಯಾಯಪೀಠ ಬುಧವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ವಿಶೇಷ ನ್ಯಾಯಾಲಯಗಳಿಗೆ ನ್ಯಾಯಾಧೀಶರು, ವಕೀಲರು, ಇತರೆ ಸಿಬ್ಬಂದಿ, ಮೂಲಸೌಕರ್ಯಗಳ ಮೇಲ್ವಿಚಾರಣೆಯನ್ನು ನಾವೇ ನಡೆಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. 2014 ಲೋಕಸಭೆ ಚುನಾವಣೆ ವೇಳೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ ನೀಡಿರುವ ವಿವರಗಳ ಪ್ರಕಾರ ದೇಶದಲ್ಲಿ ಸಂಸದರು, ಶಾಸಕರ ಮೇಲೆ ಒಟ್ಟು 1,581 ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಈ ಪ್ರಕರಣಗಳಲ್ಲಿ ಎಷ್ಟನ್ನು ಬಗೆಹರಿಸಲಾಗಿದೆ? ಎಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ತಪ್ಪಿತಸ್ತರು ಅಥವಾ ನಿರಪರಾಧಿಗಳು ಎಂದು ತೀರ್ಮಾನಿಸಲಾಗಿದೆ ಎಂಬ ವಿವರಗಳನ್ನು ತಮಗೆ ನೀಡಬೇಕೆಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಕೋರಿದೆ.

[ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ]

ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್ಜಿ) ಆತ್ಮಾರಾಮ್ ನಾದಕರ್ಣಿ ವಾದಿಸಿ, ರಾಜಕಾರಣಿಗಳು ಆರೋಪಿಗಳಾಗಿರುವ ಕೇಸುಗಳ ವಿಚಾಣೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸಲು ವಿಷಯದಲ್ಲಿ ತಮ್ಮ ವಿರೋಧವಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಪರಾಧಿಗಳು ಎಂದು ಸಾಬೀತಾದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಜೀವ ನಿಷೇಧ ವಿಧಿಸುವಂತೆ ಚುನಾವಣಾ ಆಯೋಗ ಮಾಡಿರುವ ಶಿಫಾರಸುಗಳನ್ನೂ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು. ಹೊಸದಾಗಿ ರಚಿಸಲು ಉದ್ದೇಶಿಸಿರುವ ವಿಶೇಷ ಕೋರ್ಟ್ ಗಳನ್ನು ಸದ್ಯ ಇರುವ ಸಿಬಿಐ ಕೋರ್ಟ್ ಗಳೊಂದಿಗೆ ಸೇರಿಸಬಹುದೇ ಎಂದು ಕೇಂದ್ರ ಕೇಳಿದ್ದು, ವಿಶೇಷ ಕೋರ್ಟ್ ಗಳನ್ನು ಮತ್ಯಾವುದೇ ಕೋರ್ಟ್ ಗಳೊಂದಿಗೆ ಸೇರಿಸಬಾರದು, ಇವನ್ನು ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ.

Get Latest updates on WhatsApp. Send ‘Add Me’ to 8550851559

Loading...