ನಕಲಿ ನೋಟಿನ ಗ್ರಾಮದಲ್ಲೀಗ ನೀರವ ಮೌನ |News Mirchi

ನಕಲಿ ನೋಟಿನ ಗ್ರಾಮದಲ್ಲೀಗ ನೀರವ ಮೌನ

ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತೆ ಖಾಲಿಯಾ ಚೌಕ ಎಂಬ ಗ್ರಾಮವಿದೆ. ಇಲ್ಲಿನ ರಸ್ತೆಗಳು ಸದಾ ಸೈಕಲ್, ಬೈಕುಗಳಿಂದ ಗಿಜಿಗುಡುತ್ತಿರುತ್ತದೆ. ಆದರೆ ಈಗ ಪ್ರಧಾನಿ ಮೋದಿ 500, 1000 ಮುಖ ಬೆಲೆಯ ನೋಟು ರದ್ದುಗೊಳಿಸಿದ ಪ್ರಕಟಣೆ ಹೊರಬೀಳುತ್ತಿದ್ದಂತೆ ಅಲ್ಲಿನ ರಸ್ತೆಗಳಲ್ಲಿ ನೀರವ ಮೌನ ಆವರಿಸಿದೆ. ಬಿಎಸ್ಎಫ್ ಯೋಧರಿಗಂತೂ ಸ್ವಲ್ಪ ನೆಮ್ಮದಿಯ ನಿಟ್ಟುಸಿರು.

ಅರೆ ಮೋದಿಗೂ ಅಲ್ಲಿನ ಗ್ರಾಮಕ್ಕೂ ಮತ್ತು ಬಿಎಸ್ಎಫ್ ಸಿಬ್ಬಂದಿಗೂ ಏನು ಸಂಬಂಧ ಅಂತ ಯೋಚಿಸುತ್ತಿದ್ದೀರಾ? ಇದೆ ಸಂಬಂಧ ಇದೆ… ಕೇಳಿ…

ಖಾಲಿಯಾ ಚೌಕ ನಕಲಿ ಕರೆನ್ಸಿಗೆ ರಾಜಧಾನಿ ಎಂಬ ಕುಖ್ಯಾತಿ ಗಳಿಸಿದೆ. ನೆರೆಯ ಬಾಂಗ್ಲಾದೇಶದಿಂದ ಖಾಳಿಯಾ ಗ್ರಾಮಕ್ಕೆ ಬಂದು ತಲುಪುವ ನಕಲಿ ನೋಟುಗಳು, ನಂತರ ನಮ್ಮ ದೇಶಾದ್ಯಂತ ಹರಿದಾಡುತ್ತದೆ. ಇದನ್ನು ತಡೆಗಟ್ಟಲು ನಮ್ಮ ಬಿಎಸ್ಎಫ್ ಯೋಧರು ಈ ನಕಲಿ ನೋಟು ಹಿಡಿಯಲೇ ಅರ್ಧ ಸಮಯ ವ್ಯಯ ಮಾಡುತ್ತಾರೆ. ಅಸ್ಸಾಂ, ಮೇಘಾಲಯ, ತ್ರಿಪುರ, ಪಶ್ಚಿಮ ಬಂಗಾಳ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡು 4,006 ಕಿ.ಮೀ ಬಾಂಗ್ಲಾ ಗಡಿ ಇದೆ. ಪಶ್ಚಿಮ ಬಂಗಾಳದ ಮಾಲ್ದಾ ಸೆಕ್ಟಾರ್‌ನಲ್ಲೇ 223 ಕಿಮೀ ಬಾಂಗ್ಲಾ ಗಡಿ ಇದೆ. ಆದರೆ ಕೇವಲ 150 ಕಿ.ಮೀ ಮಾತ್ರ ಗಡಿಗೆ ಬೇಲಿ ಇದೆ. ಉಳಿದ ಪ್ರದೇಶಕ್ಕೆ ಬೇಲಿ ನಿರ್ಮಿಸಲು ಸಾಧ್ಯವಾಗದಂತೆ ಗಂಗಾ ಪ್ರವಾಹ, ಬೆಟ್ಟಗುಡ್ಡಗಳಿವೆ. ಇಂತಹ ಕಡೆ ಮನುಷ್ಯರ ಪ್ರಯಾಣ ಕೂಡಾ ಕಷ್ಟ. ಆದ್ದರಿಂದಲೇ ಬೇಲಿ ಇರುವ ಕಡೆಯಿಂದಲೇ ದೇಶದೊಳಗೆ ನಕಲಿ ನೋಟು ರವಾನೆಯಾಗುತ್ತದೆ. 58 ಔಟ್ ಪೋಸ್ಟ್ ಗಳಿಂದ 2,500 ಜನ ಬಿಎಸ್ಎಫ್ ಯೋಧರು ಇಲ್ಲಿ ಕಾವಲು ಕಾಯುತ್ತಾರೆ.

ದೇಶದೊಳಗೆ ಪಾಕಿಸ್ತಾನದಿಂದಲೇ ಹೆಚ್ಚು ನಕಲಿ ನೋಟು ರವಾನೆಯಾಗುತ್ತದೆ ಎಂದು ನಾವಂದುಕೊಂಡಿದ್ದೇವೆ. ಆದರೆ ಪಾಕ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾದೇಶದಿಂದ ನಮ್ಮ ದೇಶದೊಳಗೆ ನಕಲಿ ನೋಟು ಬರುತ್ತದೆ. ಪಾಕಿಸ್ತಾನದಿಂದ ನಕಲಿ ನೋಟು ಬರಬೇಕಾದರೆ ನೇಪಾಳ, ಸೌದಿಯಿಂದ ಬರಬೇಕಾಗುತ್ತದೆ ಎಂದು ಹೆಸರು ಹೆಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿ, ಗುಜರಾತ್, ಮಹಾರಾಷ್ಟ್ರಗಳಿಗೆ ಈ ಖಾಲಿಯಾ ಚೌಕದಿಂದಲೇ ನಕಲಿ ನೋಟು ರವಾನೆಯಾಗುತ್ತದೆ. ಮಾಲ್ದಾ ಜಿಲ್ಲೆಯ ಕಟ್ಟಡ ಕಾರ್ಮಿಕರೇ ಹೆಚ್ಚಾಗಿ ಇಲ್ಲಿಂದ ನಕಲಿ ನೋಟು ತಲುಪಿಸುವ ಕೆಲಸ ಮಾಡುತ್ತಾರೆ.

ಇದೀಗ ಪ್ರಧಾನಿ ಕೊಟ್ಟ ಹೊಡೆತಕ್ಕೆ ಈ ನಕಲಿ ನೋಟು ವ್ಯವಹಾರವನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಈಗ ಸಣ್ಣ ಸಣ್ಣ ಕಳ್ಳತನಗಳಿಗೆ, ದರೋಡೆಗಳಿಗೆ ಇಳಿಯಬಹುದು ಎಂದು ಬಿಎಸ್ಎಫ್ ಮೂಲಗಳು ಹೇಳುತ್ತಿವೆ. ಸದ್ಯಕ್ಕೆ ತಮಗೆ ಸ್ವಲ್ಪ ವಿಶ್ರಾಂತಿ ದೊರಕಿದ್ದು ಇದು ಇನ್ನೆಷ್ಟು ಉಳಿಯುತ್ತದೆಯೋ ಕಾದು ನೋಡಬೇಕು ಎನ್ನುತ್ತಾರೆ ಅಧಿಕಾರಿಯೊಬ್ಬರು.

Loading...
loading...
error: Content is protected !!