ಉಕ್ಕಿನ ಸೇತುವೆ: ಮೇಲ್ಮನವಿಗೆ ಸರ್ಕಾರ ನಿರ್ಧಾರ

ಬೆಂಗಳೂರು: ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸುತ್ತಿರುವ ಉಕ್ಕಿನ ಸೇತುವೆ(ಸ್ಟೀಲ್ ಬ್ರಿಡ್ಜ್) ನಿರ್ಮಾಣಕ್ಕೆ ಈಗಾಗಲೇ ಚೆನ್ನೈನ ಹಸಿರು ನ್ಯಾಯಪೀಠ ನಾಲ್ಕುವಾರಗಳ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ನೋಟೀಸಿಗೆ ಉತ್ತರಿಸಲಿರುವ ರಾಜ್ಯ ಸರ್ಕಾರ ನವೆಂಬರ್ 25 ರಂದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ನೀಡಿರುವ ತಡೆಯಾಜ್ಞೆ ತೆರವಿಗೆ ಮೇಲ್ಮನವಿ ಸಲ್ಲಿಸಲಿದೆ.

25 ರಂದು ತಡೆಯಾಜ್ಞೆ ತೆರವು ಕೋರಿ ಸಲ್ಲಿಸಲು ಉದ್ದೇಶಿಸಿರುವ ಮೇಲ್ಮನವಿ ಕುರಿತಂತೆ ಅಡ್ವೊಕೇಟ್ ಜನರಲ್ ಮಧುನಾಯಕ್, ಸಹಾಯಕ ಅಡ್ವೋಕೇಟ್ ಸಜ್ಜನ್ ಪೂವಯ್ಯ ಹಾಗೂ ಕಾನೂನು ತಜ್ಞರ ಸಲಹೆ ಸೂಚನೆ ಪಡೆದಿದ್ದೇವೆ ಎಂದು ಬಿಡಿಎ ಹಿರಿಯ ಇಂಜಿನಿಯರ್ ಪಿಎನ್ ನಾಯಕ್ ಹೇಳಿದ್ದಾರೆ.

ನಗರದ ಬಸವೇಶ್ವರ ವೃತ್ತದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಬೆಳೆಯುತ್ತಿರುವ ನಗರದ ಹಿತದೃಷ್ಟಿಯಿಂದ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ ಎಂದು ಉಕ್ಕಿನ ಸೇತುವೆ ನಿರ್ಮಾಣವನ್ನು ಸಮರ್ಥಿಸಿಕೊಂಡರು.