ಆಕ್ಷೇಪಾರ್ಹ ವೀಡಿಯೋಗಳ ಕುರಿತು ಫೇಸ್ಬುಕ್, ಗೂಗಲ್ ವಾಟ್ಸಾಪ್ ಗಳಿಗೆ ಸುಪ್ರೀಂ ಆದೇಶ

ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾಚಾರ, ಮಕ್ಕಳ ಅಶ್ಲೀಲ ವೀಡಿಯೋ ಮತ್ತು ಫೋಟೋಗಳ ಅಪ್ಲೋಡಿಂಗ್ ವಿರುದ್ಧ ಬಂದಿರುವ ದೂರುಗಳ ವಿವರಗಳನ್ನು ನೀಡುವಂತೆ ಫೇಸ್ಬುಕ್, ಗೂಗಲ್, ವಾಟ್ಸಾಪ್, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ದೂರುಗಳ ಕುರಿತು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಸೂಚಿಸಿದೆ.

ಇಂತಹ ಅಪರಾಧ ವಿಷಯದಲ್ಲಿ ಪೋಸ್ಕೋ ಕಾಯ್ದೆಯಡಿ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬಬುದನ್ನು ತಿಳಿಸುವಂತೆ ಜಸ್ಟಿಸ್ ಮದನ್ ಬಿ. ಲೋಕೂರ್, ಯು.ಯು.ಲಲಿತ್ ಅವರ ನ್ಯಾಯಪೀಠ ಗೃಹ ಇಲಾಖೆಗೂ ಆದೇಶಿಸಿದೆ.

ಆಕ್ಷೇಪಾರ್ಹ ವೀಡಿಯೋ, ವಿಷಯಗಳ ವಿರುದ್ಧ ಈ ಆಗಸ್ಟ್ 31 ರವರೆಗೆ ಭಾರತದಲ್ಲಿ ಎಷ್ಟು ದೂರುಗಳು ಬಂದಿವೆ, ಅವುಗಳ ಮೇಲೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವಿವರಗಳನ್ನು ತಿಳಿಸುತ್ತಾ ಅಫಿಡವಿಟ್ಗಳನ್ನು ದಾಖಲಿಸುವಂತೆ ಆಯಾ ಕಂಪನಿಗಳಿಗೆ ಆದೇಶಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.

ಈ ಹಿಂದಿನ ಸುಪ್ರೀಂ ಕೋರ್ಟ್ ನ್ಯಾಯಾಧೀಶ್ ಹೆಚ್.ಎಲ್.ದತ್ತು ಅವರಿಗೆ ಹೈದರಾಬಾದ್ ಮೂಲದ ಎನ್.ಜಿ.ಒ ಪ್ರಜ್ವಲ ಕಳುಹಿಸಿದ ಪತ್ರದ ಕುರಿತು ಕೋರ್ಟ್ ವಿಚಾರಣೆ ನಡೆಸಿತು. ಪ್ರಜ್ವಲ ಸಂಸ್ಥೆಯು ಪತ್ರದೊಂದಿಗೆ ಅತ್ಯಾಚಾರದ ಎರಡು ವೀಡಿಯೋಗಳನ್ನೂ ಪೆನ್ ಡ್ರೈವ್ ನಲ್ಲಿ ಕಳುಹಿಸಿತ್ತು.

ಪತ್ರವನ್ನು ಸುಮೋಟೋ ಆಗಿ ಸ್ವೀಕರಿಸಿದ ಕೋರ್ಟ್, ವಾಟ್ಸಾಪ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋಗಳ ವಿರುದ್ಧ ಕೆಂಡ ಕಾರಿದೆ. ಈ ಕುರಿತು ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತೆ ಸಿಬಿಐ ಗೆ ಸೂಚಿಸಿದೆ. ಇನ್ನು ಸೋಮವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಬ್ಲಾಕ್ ಮಾಡುವಂತೆ ಕ್ರಮ ಕೈಗೊಳ್ಳುವ ಕುರಿತು ಇಂಟರ್ನೆಟ್ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ಮಾಡುವ ಪ್ರಯತ್ನಗಳನ್ನು ಸಂಸ್ಥೆಗಳ ಪ್ರತಿನಿಧಿಗಳು ನ್ಯಾಯಾಲಯಕ್ಕೆ ವಿವರಿಸಿದರು.