ಕೇರಳ ಲವ್ ಜಿಹಾದ್ ಪ್ರಕರಣ: ಎನ್.ಐ.ಎ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಕೇರಳದ 24 ವರ್ಷದ ಯುವತಿಯೊಬ್ಬರು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ತಂಡ(ಎನ್.ಐ.ಎ)ಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಆರ್.ವಿ.ರವೀಂದ್ರನ್ ಅವರ ಮೇಲ್ವಿಚಾರಣೆಯಲ್ಲಿ ಎನ್.ಐ.ಎ ತನಿಖೆ ನಡೆಸಲಿದೆ. ಇದಕ್ಕೂ ಮುನ್ನ ಪ್ರಕರಣದ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ತಂಡದೊಂದಿಗೆ ಹಂಚಿಕೊಳ್ಳುವಂತೆ ಕೇರಳ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಅಖಿಲಾ ಎಂಬಾಕೆ ಮತಾಂತರವಾಗಿ ಹದಿಯಾ ಎಂದು ಹೆಸರು ಬದಲಿಸಿಕೊಂಡು ಶೆಫಿನ್ ಜಹಾನ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಮೇ 24 ರಂದು ಕೇರಳ ಹೈಕೋರ್ಟ್ ಈ ಮದುವೆಯನ್ನು ಅನೂರ್ಜಿತಗೊಳಿಸಿತ್ತು.

ಕಳೆದ ಡಿಸೆಂಬರ್ ನಲ್ಲಿ ಶೆಫಿನ್ ಜಹಾನ್ ಅಖಿಲಾ ಎಂಬ ಯುವತಿಯನ್ನು ಮತಾಂತರಗೊಳಿಸಿ ನಂತರ ಮದುವೆಯಾಗಿದ್ದ. ಆದರೆ ಇದು ಲವ್ ಜಿಹಾದ್ ಎಂದು ಪರಿಗಣಿಸಿದ ಕೇರಳ ಹೈಕೋರ್ಟ್ ಈ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಇದು ಮಹಿಳಾ ಸ್ವಾತಂತ್ರ್ಯಕ್ಕೆ ಆದ ಅಪಮಾನ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ನಂತರ ಅಖಿಲಾಳನ್ನು ಪೋಷಕರೊಂದಿಗೆ ಕಳುಹಿಸಿದ ಕೋರ್ಟ್, ಆಕೆ ಮತ್ತು ಆಕೆಯ ಪೋಷಕರಿಗೆ ಬಿಗಿ ಭದ್ರತೆ ನೀಡುವಂತೆ ಸೂಚಿಸಿತ್ತು.

ತಮ್ಮ ಮಗಳನ್ನು ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಈ ಮದುವೆಯ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಆದರೆ ಈ ಕುರಿತು ವರದಿ ಸಲ್ಲಿಸಿದ ಪೊಲೀಸರು ಅಖಿಲಾಳನನ್ನು ಮದುವೆಯಾದ ವ್ಯಕ್ತಿಗೂ ಉಗ್ರ ಸಂಘಟನೆಗೂ ಯಾವುದೇ ಸಂಬಂಧವಿರುವಂತೆ ಸಾಕ್ಷಿಗಳಿಲ್ಲ ಎಂದು ಹೇಳಿದ್ದರು.

ಕೋರ್ಟ್ ಸೂಚನೆಯಂತೆ 24 ಗಂಟೆ ಕಾಲ ಯುವತಿ ಮತ್ತು ಆಕೆಯ ಪೋಷಕರ ಮನೆಗೆ ಭದ್ರತೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.