ಪಾರದರ್ಶಕತೆ ತರಲು ಸುಪ್ರೀಂ ಕೋರ್ಟಿನಲ್ಲಿ ರೋಸ್ಟರ್ ವಿಧಾನ

ಸುಪ್ರೀಂ ಕೋರ್ಟಿನಲ್ಲಿ ದಾಖಲಾಗುವ ಸೂಕ್ಷ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಾಧೀಶರಿಗೆ ಹಂಚಿಕೆ ಮಾಡುವಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರುವ ವಿಚಾರದಲ್ಲಿ ಬಂದ ಸಲಹೆಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಪರಿಶೀಲಿಸಿದ್ದಾರೆ. ಈ ಸಲಹೆಗಳನ್ನು ಶೀಘ್ರದಲ್ಲಿಯೇ ನ್ಯಾಯವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನಿಂದ ಬಂದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಹಂಚಿಕೆಯಲ್ಲಿ ರೋಸ್ಟರ್ ಪದ್ದತಿಯನ್ನು ಅನುಸರಿಸಲಾಗುತ್ತದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಆನ್ಲೈನ್ ನಲ್ಲಿ ತಿಳಿಯಬಹುದು ಹಂಚಿಕೆ ಮಾಡಿದ ಪ್ರಕರಣಗಳು

ನ್ಯಾಯಾಧೀಶರಿಗೆ ಹಂಚಿಕೆ ಮಾಡುವ ಪ್ರಕರಣಗಳ ಮಾಹಿತಿಯನ್ನು ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಹೀಗೆ ಮಾಡಿದರೆ, ಯಾರ ಪ್ರಕರಣಗಳನ್ನು ಯಾವ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಸುಲಭವಾಗಿ ಸಾರ್ವಜನಿಕರಿಗೆ ತಿಳಿಯುವಂತಾಗುತ್ತದೆ.

Get Latest updates on WhatsApp. Send ‘Subscribe’ to 8550851559