ಸುಷ್ಮಾ ಸ್ವರಾಜ್ ಗೆ ಕೋಪ ತರಿಸಿದ ಟ್ವೀಟ್

***

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳ ಮೂಲಕ ಬರುವ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಹೀಗಾಗಿ ಪ್ರತಿದಿನ ಹಲವರು ತಮ್ಮ ಸಮಸ್ಯೆಗಳನ್ನು ಟ್ವಿಟರ್ ಮೂಲಕ ಅವರ ಗಮನಕ್ಕೆ ತರುತ್ತಿರುತ್ತಾರೆ. ಕೆಲವರು ಅಸಂಬದ್ಧ ಪ್ರಶ್ನೆ ಕೇಳಿ ಕಿರಿಕಿರಿ ಮಾಡುವುದೂ ಉಂಟು.

ಪುಣೆಯ ವ್ಯಕ್ತಿಯೊಬ್ಬ ಹೀಗೆಯೇ ಅಸಂಬದ್ಧ ಪ್ರಶ್ನೆ ಕೇಳಿದ್ದು ಸುಷ್ಮಾ ಸ್ವರಾಜ್ ಆಕ್ರೋಶಕ್ಕೆ ಕಾರಣವಾಗಿದೆ. “ಮೇಡಂ ದಯವಿಟ್ಟು ನನ್ನ ಪತ್ನಿಯನ್ನು ನನ್ನ ಬಳಿಗೆ ಕಳುಹಿಸಿ. ಆಕೆ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಾಳೆ. ಆಕೆಯನ್ನು ಪುಣೆಗೆ ವರ್ಗಾವಣೆ ಮಾಡಲು ತಾವು ಸಹಾಯ ಮಾಡಿ” ಎಂದು ಆತ ಮನವಿ ಮಾಡಿದ್ದ.

ಸಾಮಾಜಿಕ ತಾಣದಲ್ಲಿ ಇಂತಹ ಪ್ರಶ್ನೆ ಕೇಳುತ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಸುಷ್ಮಾ ಸ್ವರಾಜ್, “ನೀವು, ನಿಮ್ಮ ಪತ್ನಿ ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇ ಆಗಿದ್ದರೇ, ಇಂತಹ ಪ್ರಶ್ನೆ ಕೇಳಿದ್ದಕ್ಕೆ ಈಗಿಂದೀಗಲೇ ಅಮಾನತು ಆದೇಶ ಕಳುಹಿಸುತ್ತಿದ್ದೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಷ್ಟೇ ಅಲ್ಲದೆ ಆತನ ಟ್ವೀಟ್ ಅನ್ನು ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಫಾರ್ವಾರ್ಡ್ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಸಚಿವರು “ತನ್ನ ಗಮನಕ್ಕೆ ಈ ವಿಷಯ ತಂದಿದ್ದಕ್ಕೆ ಸುಷ್ಮಾ ಸ್ವರಾಜ್ ರವರಿಗೆ ಧನ್ಯವಾದಗಳು. ಉದ್ಯೋಗಿಗಳ ವರ್ಗಾವಣೆ ವಿಷಯದಲ್ಲಿ ನನ್ನ ಪಾತ್ರವಿರುವುದಿಲ್ಲ. ರಯಲ್ವೇ ಮಂಡಳಿ ಇಂತಹ ವ್ಯವಹಾರಗಳನ್ನು ನಡೆಸುತ್ತದೆ” ಎಂದು ಹೇಳಿದರು.