ಆ ಘಟನೆ ನಡೆದ ನಂತರವೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಗೌರಿ ಲಂಕೇಶ್ – News Mirchi

ಆ ಘಟನೆ ನಡೆದ ನಂತರವೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಗೌರಿ ಲಂಕೇಶ್

ಐಜಿಪಿ ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಮುಂದಾಗಿದ್ದು, ಗೌರಿ ಲಂಕೇಶ್ ಅವರು ಹತ್ಯೆಯಾದ ರಾಜರಾಜೇಶ್ವರಿ ನಗರದ ಮನೆ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಿದ್ದ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸುಮಾರು 10 ವರ್ಷಗಳಿಂದ ಗೌರಿ ಲಂಕೇಶ್ ಅವರು ಮನೆಯಲ್ಲಿ ಏಕಾಂಗಿಯಾಗಿ ಜೀವಿಸಿದ್ದರು. ತಮಗೆ ಭದ್ರತೆಯ ಅವಶ್ಯಕತೆ ಇದೆ ಎಂದು ಆಕೆಗೆ ಅನ್ನಿಸಿರಲೇ ಇಲ್ಲ. 15 ದಿನಗಳ ಹಿಂದೆ ಗೌರಿ ಲಂಕೇಶ್ ಅವರನ್ನು ಗಾಂಧಿ ಬಜಾರಿನಲ್ಲಿನ ಅವರ ಕಛೇರಿಯಿಂದ ಮನೆಯವರೆಗೂ ಯಾರೋ ಇಬ್ಬರು ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಬಂದಿತ್ತಂತೆ. ಈ ಮಾತನ್ನು ಅವರು ತಮ್ಮ ತಾಯಿಯ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆ ಘಟನೆಯ ನಂತರವೇ ತಮ್ಮ ಮನೆ ಬಳಿ ಸಿಸಿಟಿವಿಯನ್ನು ಅಳವಡಿಸಿಕೊಂಡಿದ್ದರು.

ತಮ್ಮನ್ನು ಅನುಮಾನಾಸ್ಪದ ವ್ಯಕ್ತಿಗಳು ಹಿಂಬಾಲಿಸಿದ್ದರ ಬಗ್ಗೆ ಗೌರಿ ಲಂಕೇಶ್ ಪೊಲೀಸರ ಗಮನಕ್ಕೆ ತಂದಿರಲಿಲ್ಲ. ಆದರೆ ಸೋಮವಾರ ಗೃಹ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಭದ್ರತೆಗೆ ಮನವಿ ಮಾಡಲು ನಿರ್ಧರಿಸಿದ್ದರೂ ಅದ್ಯಾಕೋ ಭೇಟಿಯಾಗಿರಲಿಲ್ಲ.

ಹಂತಕರು ಹತ್ಯೆ ಮಾಡುವುದಕ್ಕೂ ಮುನ್ನ ಸುಮಾರು 20 ದಿನಗಳಿಂದ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು ಎಂದು ಅನುಮಾನಿಸಲಾಗಿದೆ. ನಿಖರ ಯೋಜನೆ ರೂಪಿಸಿಯೇ ಈ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಗೌರಿ ಹತ್ಯೆಯಾದ ಮಂಗಳವಾರವೂ ಆಕೆಯ ಕಛೇರಿಯಿಂದ ಮನೆಯವರೆಗೂ ಹಂತಕರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪತ್ರಕರ್ತೆ ತನ್ನ ಕಾರು ಪಾರ್ಕ್ ಮಾಡಿ ಗೇಟ್ ಕಡೆ ಬರುತ್ತಿದ್ದಂತೆ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಗಳಲ್ಲೊಬ್ಬ ಆಕೆಯ ಕಡೆ ನುಗ್ಗಿ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

ನಿಮ್ಮ ಮೊಬೈಲ್ ನಲ್ಲಿ ನ್ಯೂಸ್ ಅಪ್ಡೇಟ್ಸ್ ಗಾಗಿ “ADD ME” ಎಂದು ನಿಮ್ಮ ಹೆಸರಿನ ಜೊತೆ 8550851559 ಗೆ ವಾಟ್ಸಾಪ್ ಮಾಡಿ

Loading...