ಇತಿಹಾಸದಲ್ಲಿ ತಾಜ್ ಮಹಲ್ ಗೆ ಸ್ಥಾನವಿಲ್ಲ: ಬಿಜೆಪಿ ಶಾಸಕ – News Mirchi

ಇತಿಹಾಸದಲ್ಲಿ ತಾಜ್ ಮಹಲ್ ಗೆ ಸ್ಥಾನವಿಲ್ಲ: ಬಿಜೆಪಿ ಶಾಸಕ

ಮೀರತ್: ಬಿಜೆಪಿ ಶಾಸಕ ಸಂಗೀತ್ ಸೋಮ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಐತಿಹಾಸಿಕವಾಗಿ ತಾಜ್ ಮಹಲ್ ಗೆ ಯಾವುದೇ ಮಹತ್ವವಿಲ್ಲ, ಹಿಂದುಗಳನ್ನು ಗುರಿಯಾಗಿಸಿಕೊಂಡಿದ್ದಲ್ಲದೆ ತನ್ನ ತಂದೆಯನ್ನೇ ಜೈಲಿಗೆ ಹಾಕಿದ ವ್ಯಕ್ತಿಯನ್ನು ಇತಿಹಾಸದಲ್ಲಿ ವೈಭವೀಕರಿಸಿಸಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾವೆಲ್ಲಾ ನಂಬಿರುವಂತೆ ತಾಜ್ ಮಹಲ್ ನಿರ್ಮಿಸಿದ ಷಹಜಹಾನ್ ನನ್ನು ಅವರ ಮಗ ಔರಂಗಜೇಬ್ ಸೆರೆಮನೆಗೆ ಕಳುಹಿಸಿದ್ದರು, ಆದರೆ ಷಹಜಹಾನ್ ತಮ್ಮ ತಂದೆಯನ್ನು ಜೈಲಿಗೆ ಹಾಕಿದ್ದರು ಎಂದು ಹೇಳಿರುವ ಸೋಮ್ ಹೇಳಿಕೆ ಕುರಿತು ಸಾಮಾಜಿಕ ತಾಣಗಳಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಭಾನುವಾರ ಮೀರತ್ ಜಿಲ್ಲೆಯ ಪ್ರವಾಸದ ಭಾಗವಾಗಿ ಎಂಟನೇ ಶತಮಾನದ ಅನಾಂಗ್ಪಾಲ್ ಸಿಂಗ್ ತೋಮರ್ ವಿಗ್ರಹ ಅನಾವರಣ ಕಾರ್ಯಕ್ರಮದಲ್ಲಿ ಸಂಗೀತ್ ಸೋಮ್ ಮಾತನಾಡುತ್ತಿದ್ದರು. ಬಾಬರ್, ಅಕ್ಬರ್ ಮತ್ತು ಔರಂಗಜೇಬ್ ದ್ರೋಹಿಗಳಾಗಿದ್ದು, ಅವರ ಹೆಸರುಗಳನ್ನು ಇತಿಹಾಸದ ಪುಟಗಳಿಂದ ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದರು.

ತಾಜ್ ಮಹಲ್ ಅನ್ನು ಉತ್ತರಪ್ರದೇಶ ಟೂರಿಸಂ ಬುಕ್ಲೆಟ್ ನಿಂದ ತೆಗೆದಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಆದರೆ ಅಸಲಿಗೆ ತಾಜ್ ಮಹಲ್ ಗೆ ಇರುವ ಇತಿಹಾಸ ಏನು ಎಂದು ಸೋಮ್ ಪ್ರಶ್ನಿಸಿದರು. ಮಹಾರಾಣಾ ಪ್ರತಾಪ್, ಶಿವಾಜಿ ನಿಜವಾದ ಯೋಧರು, ಅವರ ಜೀವನ ಚರಿತ್ರೆ ಕುರಿತು ಶಾಲಾ ಕಾಲೇಜುಗಳಲ್ಲಿ ಬೋಧಿಸಬೇಕು ಎಂದು ಅವರು ಒತ್ತಾಯಿಸಿದರು.

ಹೇಳಿಕೆಗೆ ಕಿಡಿ ಕಾರಿದ ಅಸದುದ್ದೀನ್ ಓವೈಸಿ

ಸೋಮ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ, ಕೆಂಪು ಕೋಟೆಯನ್ನೂ ನೀವು ಹೇಳಿದ ಆ ದ್ರೋಹಿಗಳ ನಿರ್ಮಿಸಿದ್ದಾರೆ. ಅಲ್ಲಿಂದ ತ್ರಿವರ್ಣ ದ್ವಜವನ್ನು ಹಾರಿಸದಂತೆ ಪ್ರಧಾನಿ ಮೋದಿ ತಡೆಯುತ್ತಾರಾ? ಪ್ರವಾಸಕ್ಕೆ ಬಂದ ವಿದೇಶಿ ನಾಯಕರಿಗೆ ದೇಶದ್ರೋಹಿಗಳು ನಿರ್ಮಿಸಿದ ಹೈದರಾಬಾದ್ ಹೌಸ್ ನಲ್ಲಿ ಆತಿಥ್ಯ ನೀಡುವುದನ್ನು ಮೋದಿ ನಿಲ್ಲಿಸಿಬಿಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ತೊಲಗಿಸುವ ಶಕ್ತಿ ಕೇಂದ್ರಕ್ಕೆ ಇದೆಯೇ ಎಂದು ಅಸದುದ್ದೀನ್ ಸವಾಲೆಸೆದಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...