ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು: ಫಾರೂಖ್ ಅಬ್ದುಲ್ಲಾ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಪಾಕಿಸ್ತಾನಕ್ಕೆ ಸೇರುತ್ತದೆ, ಭಾರತ ಮತ್ತು ಪಾಕ್ ನಡುವೆ ಇದಕ್ಕಾಗಿ ಎಷ್ಟೇ ಯುದ್ಧಗಳು ನಡೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದು ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಭಾರತ, ಚೀನಾ, ಪಾಕ್ ನಡುವೆ ಕಾಶ್ಮೀರವಿದೆ, ಸ್ವತಂತ್ರ ಕಾಶ್ಮೀರ ಕುರಿತು ಚರ್ಚೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನ ಪ್ರಧಾನಿ ಖಕಾನ್ ಅಬ್ಬಾಸಿ ಸ್ವತಂತ್ರ ಕಾಶ್ಮೀರ ಚಿಂತನೆಯನ್ನು ತಿರಸ್ಕರಿಸಿದ್ದರು. ವಾಸ್ತವದಲ್ಲಿ ಅದು ಸಾಧ್ಯವಿಲ್ಲ ಎಂದು ಪಾಕ್ ಪ್ರಧಾನಿ ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಫಾರೂಖ್ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆಜಾದಿ (ಸ್ವತಂತ್ರ) ಕಾಶ್ಮೀರ ಕುರಿತು ಚರ್ಚೆಯಾಗಬೇಕಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಭಾರತ, ಹೀಗೆ ಮೂರು ದೇಶಗಳ ನಡುವೆ ನಾವಿದ್ದೇವೆ ಎಂದು ಹೇಳಿದ್ದಾರೆ.

ಈ ಮೂರು ದೇಶಗಳಿಗೆ ಅಣ್ವಸ್ತ್ರ ಸಾಮರ್ಥ್ಯವಿದೆ. ಹೀಗಾಗಿ ಅಲ್ಲಾ ಹೆಸರು ಹೊರತುಪಡಿಸಿ ಇನ್ಯಾವುದನ್ನೂ ಬಯಸಬಾರದು ಎಂದು ಹೇಳಿದರು. ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಹೇಳಿಕೆಗಳನ್ನು ನೀಡಿದ್ದಾರೆ. ಆಜಾದಿ ಕುರಿತು ಪ್ರತ್ಯೇಕತಾವಾದಿಗಳು ಮಾತನಾಡುವುದು ತಪ್ಪು ಎಂದು ಅವರು ಹೇಳಿದರು. ಪಿಒಕೆ ಭಾರತಕ್ಕೆ ಸೇರುತ್ತದೆ ಎಂದು ಕೇಂದ್ರ ಸಚಿವ ಹನ್ಸ್ ರಾಜ್ ಅಹಿರ್ ನೀಡಿದ ಹೇಳಿಕೆಗೆ ಫಾರೂಖ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರ, ಮಹಾರಾಜ ಹರಿಸಿಂಗ್ ನಡುವೆ ನಡೆದ ವಿಲೀನ ಒಪ್ಪಂದ ಮರೆತರೆ ಹೇಗೆ ಎಂದು ಪ್ರಶ್ನಿಸಿದರು. ಆ ಒಪ್ಪಂದದ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರ ಪಾಕ್ ಗೆ ಸೇರುತ್ತದೆ, ಒಂದು ವೇಳೆ ನಮಗೇ ಸೇರಿದ್ದು ಎಂದು ಹೇಳಿದರೆ, ವಿಲೀನ ಒಪ್ಪಂದದ ನಿಯಮಗಳ ಕುರಿತು ಮಾತನಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559